National Political News: ತಮ್ಮ ರಾಜ್ಯದಲ್ಲಿ ಕೇಂದ್ರದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದು ಗಮನ ಸೆಳೆದಿದ್ದ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉತ್ತರಾಖಂಡ್‌ನಲ್ಲಿನ ಎಲ್ಲ ಸರ್ಕಾರಿ ಅಧಿಸೂಚನೆಗಳು ಹಾಗೂ ಕಾಮಗಾರಿಗಳು ಸೇರಿದಂತೆ ಎಲ್ಲ ಉದ್ಘಾಟನಾ ಫಲಕಗಳಲ್ಲಿ ಹಿಂದೂ ಕ್ಯಾಲೆಂಡರ್‌ನಲಿರುವ ಪಂಚಾಂಗದ ಪ್ರಕಾರ ದಿನಾಂಕ ಹಾಗೂ ತಿಂಗಳನ್ನು ನಮೂದಿಸುವಂತೆ ರಾಜ್ಯದ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಇನ್ನೂ ನಾನು ಹೇಳಿರುವಂತೆ, ಉದಾಹರಣೆಗೆ, ಮಾರ್ಚ್ 18, 2025 ಅನ್ನು ಹಿಂದೂ ಕ್ಯಾಲೆಂಡರ್‌ನಲ್ಲಿ ಚೈತ್ರ ಶುಕ್ಲ ಚತುರ್ಥಿ, ವಿಕ್ರಮ ಸಂವತ್ಸರ 2082, ಶಕ ಸಂವತ್ಸ 1946 ಮತ್ತು ಫಾಲ್ಗುಣ 27 ಎಂದು ಬರೆಯಬೇಕಾಗುತ್ತದೆ. ಅಲ್ಲದೆ ವಿಕ್ರಮ ಸಂವತ್ಸರ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಪ್ರಮುಖ ಅಂಶವಾಗಿದೆ ಎಂದು ಧಾಮಿ ಹೇಳಿದ್ದಾರೆ. ಅಂದಹಾಗೆ ಭವಿಷ್ಯದಲ್ಲಿ ಸರ್ಕಾರಿ ದಾಖಲೆಗಳು, ಗೆಜೆಟ್ ಅಧಿಸೂಚನೆಗಳು, ಅಡಿಪಾಯ ಕಲ್ಲುಗಳು ಮತ್ತು ಉದ್ಘಾಟನಾ ಫಲಕಗಳಲ್ಲಿ ವಿಕ್ರಮ ಸಂವತ್ಸರ ಮತ್ತು ಫಾಲ್ಗುಣದಂತಹ ಹಿಂದೂ ತಿಂಗಳುಗಳು, ಜೊತೆಗೆ ಕೃಷ್ಣ ಪಕ್ಷ/ಶುಕ್ಲ ಪಕ್ಷ ಪದನಾಮಗಳು ಸೇರಿರಬೇಕು. ಈ ಕುರಿತು ಸಾಮಾನ್ಯ ಆಡಳಿತ ಇಲಾಖೆಗೆ ತ್ವರಿತವಾಗಿ ಆದೇಶಗಳನ್ನು ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಧಾಮಿ ಅವರು ನಿರ್ದೇಶಿಸಿದ್ದಾರೆ.
ಪ್ರಸ್ತುತ ಉತ್ತರಾಖಂಡ್‌ನಲ್ಲಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಅಧಿಕಾರದಲ್ಲಿದ್ದು, ಕಳೆದ ನಾಲ್ಕು ವರ್ಷಗಳಿಂದ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಉತ್ತರಾಖಂಡ್‌ನ 10ನೇ ಸಿಎಂ ಆಗಿರುವ ಇವರು ಇದೀಗ ಸಚಿವ ಸಂಪುಟದ ವಿಸ್ತರಣೆ ಹಾಗೂ ಅನೇಕ ರಾಜಕೀಯದ ಕ್ಷಿಪ್ರ ಬೆಳವಣಿಗೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಅಲ್ಲಿ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಈಗಾಗಲೇ ಶಾಸಕರು ತಂಡೋಪ ತಂಡವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಂತ್ರಿಗಿರಿಗೆ ಬೇಡಿಕೆ ಇಡುತ್ತಿದ್ದಾರೆ. ಇನ್ನೂ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಶಾಸಕರಿಂದ ಇದೀಗ ಬಂಡಾಯದ ಆತಂಕವೂ ಧಾಮಿ ಅವರಿಗಿದೆ. ಈ ಎಲ್ಲದರ ನಡುವೆಯೇ ಅವರು ತಮ್ಮ ಹಿಂದೂ ಪ್ರೇಮ ಮೆರೆದಿರುವುದು ಗಮನಾರ್ಹವಾಗಿದೆ.