Wednesday, June 18, 2025

Latest Posts

ಅಲ್ಲಿ ಬಂದವರ ಉದ್ದೇಶ ಒಳ್ಳೆಯದೇ ಆಗಿತ್ತು, ಆದ್ರೆ ಯೋಜನೆ, ಸಮನ್ವಯದ ಕೊರತೆ ಇತ್ತು : ನಟಿ ರಮ್ಯಾ

- Advertisement -

Sandalwood News: ಸತತ 18 ವರ್ಷಗಳ ಬಳಿಕ ಆರ್​ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಚೊಚ್ಚಲ ಟ್ರೋಫಿಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಸಂಭ್ರಮಕ್ಕಾಗಿ ಇಡೀ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಅಲ್ಲದೆ ಸೋಸಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದೇ ಒಂದು ಪೊಸ್ಟ್​​ಗೆ ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಕಡೆಗೆ ಲಕ್ಷಾಂತರ ಜನರು ಹರಿದು ಬಂದಿದ್ದರು. ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಇದ್ದ ಕೆಲವೇ ಘಂಟೆಗಳಲ್ಲಿಯೇ ಸಿದ್ಧತೆಯಲ್ಲಿ ರಾಜ್ಯದ ಹಲವೆಡೆಗಳಿಂದ ಜನರು ರಾಜ್ಯ ರಾಜಧಾನಿಗೆ ಬಂದೇ ಬಿಟ್ಟಿದ್ದರು.

ಎರಡು ಕಡೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಧಾನಸೌಧದ ಬಳಿ ನಡೆದ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಅಲ್ಲದೆ ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಈ ವೇಳೆ ಅಲ್ಲಿಗೆ ಪೊಲೀಸರ ಸಂಖ್ಯೆ ತೀರ ಕಡಿಮೆ ಇತ್ತು, ಅವರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಪ್ರವಾಹದಂತೆ ನುಗ್ಗಿಬಂದ ಜನಸಾಗರ ಮುಂದೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಏಕಾಏಕಿ ಜನದಟ್ಟಣೆಯಾಗಿ ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿರುವ ದಾರುಣ ಘಟನೆಗೆ ಜೂನ್ 4 ಸಾಕ್ಷಿಯಾಗಿತ್ತು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿಗಳ ಅಮಾನತು..!

ಇನ್ನೂ ಈ ದುರ್ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ರಾಜ್ಯಾದ್ಯಂತ ಜನಾಕ್ರೋಶ ಹೆಚ್ಚಾಗಿದೆ. ವಿಪಕ್ಷಗಳೂ ಕೂಡ ಈ ದುರಂತಕ್ಕೆ ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇರ ಹೊಣೆ ಎಂದು ಆರೋಪಿಸಿ ಅವರುಗಳ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಘಟನೆ ಸಂಬಂಧ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿಯೇ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ನೀಡಿದೆ. ಅಲ್ಲದೆ ಗುಪ್ತಚರ ವೈಫಲ್ಯಕ್ಕೆ ಇಲಾಖೆಯ ಎಡಿಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.

ಮಾಲ್‌ಗಳಲ್ಲಿ ಮತ್ತು ಬೀದಿಗಳಲ್ಲಿ ಜನರು ಖುಷಿಯಿಂದ ಕುಣಿದಾಡಿದರು..

ಇನ್ನೂ ಇದೇ ವಿಚಾರಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ, ಆರ್‌ಸಿಬಿ ಗೆದ್ದ ರಾತ್ರಿ ಕರ್ನಾಟಕದಾದ್ಯಂತ ಸಂಭ್ರಮಾಚರಣೆಗಳು ನಡೆದವು. ಮಾಲ್‌ಗಳಲ್ಲಿ ಮತ್ತು ಬೀದಿಗಳಲ್ಲಿ ಜನರು ಖುಷಿಯಿಂದ ಕುಣಿದಾಡಿದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿಲ್ಲ. ಕಾಲ್ತುಳಿತಗಳು ಸುಮ್ಮನೆ ಸಂಭವಿಸುವುದಿಲ್ಲ, ಅವುಗಳನ್ನು ಹುಟ್ಟು ಹಾಕಲಾಗುತ್ತದೆ. ಸರ್ಕಾರ, ಅಧಿಕಾರಿಗಳು, ಆರ್​ಸಿಬಿ, ಪೊಲೀಸರು, ಕೆಎಸ್‌ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಈ ಕಾಲ್ತುಳಿತ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಅಮಾನತು ಯೋಚಿಸದೇ ತೆಗೆದುಕೊಂಡ ನಿರ್ಧಾರ..

ಕ್ರೀಡೆಯ ಗೆಲುವನ್ನು ಆಚರಿಸಲು ಬಂದ ಮುಗ್ಧರು ಸಾವನ್ನಪ್ಪಿದ್ದಾರೆ. ಈ ಸಾವಿಗೆ ಕಾರಣಗಳನ್ನು ಹುಡುಕಾಡಲು ಮತ್ತು ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನದ ಮಾಡಬೇಕಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಯೋಚಿಸದೇ ತೆಗೆದುಕೊಂಡ ನಿರ್ಧಾರವಾದಂತಾಗಿದೆ. ಈ ತೀರ್ಮಾನ ತೆಗೆದುಕೊಳ್ಳುವ ಮೊದಲು ವರದಿಗಾಗಿ ಕಾಯಬೇಕಿತ್ತು ಎಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಅಲ್ಲಿ ಬಂದ ಎಲ್ಲರಿಗೂ ಒಳ್ಳೆಯ ಉದ್ದೇಶವೇ ಇತ್ತು. ಆದರೆ, ಯೋಜನೆ ಇಲ್ಲದೆ, ಸಮನ್ವಯದ ಕೊರತೆಯಿಂದ ಈ ರೀತಿ ಆಯಿತು. ಆಟಗಾರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಬದಲು ತೆರೆದ ಬಸ್​ನಲ್ಲಿ ರ್ಯಾಲಿ ಮಾಡಿದ್ದರೆ ಭಯಾನಕ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ನಟಿ ರಮ್ಯಾ ಸರ್ಕಾರಕ್ಕೆ ತಿವಿದಿದ್ದಾರೆ.

- Advertisement -

Latest Posts

Don't Miss