ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ, 4 ಹುಲಿಗಳು ಅಸಹಜವಾಗಿ ಸಾವನ್ನಪ್ಪಿವೆ. 1 ತಾಯಿ ಹುಲಿ – 3 ಹುಲಿ ಮರಿಗಳು ಸಾವನ್ನಪ್ಪಿದ್ದು, ನಿನ್ನೆ ಹುಲಿಗಳ ಮೃತದೇಹಗಳು ಪತ್ತೆಯಾಗಿವೆ.
ಹುಲಿಗಳ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಪರ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿದ್ದಾರೆ. PCCF ಅಂದ್ರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡ ತನಿಖೆ ಮಾಡಿ 3 ದಿನಗಳ ಒಳಗೆ ವರದಿ ನೀಡಿ. ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ, ವಿಷಪ್ರಾಶಾನ ಅಥವಾ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ರೆ, ಕಾರಣರಾದವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಸೂಚಿಸಿದ್ದಾರೆ.
ಇನ್ನು, ಇಂಧಿರಾಗಾಂಧಿ ಪ್ರಧಾನಮಂತ್ರಿ ಆಗಿದ್ದ ಕಾಲದಲ್ಲಿ, ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಪಣ ತೊಟ್ಟಿದ್ರು. ಹೀಗಾಗಿ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೆ ತರಲಾಯ್ತು. ಅಲ್ಲಿಂದ ಪ್ರತಿ 4 ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತೆ.
ಈ ಯೋಜನೆಗೆ 2023ಕ್ಕೆ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ, ಹುಲಿ ಗಣತಿ ವರದಿ ಬಿಡುಗಡೆ ಮಾಡಲಾಯ್ತು. ಹೀಗಾಗಿ 2018-2022ರವರೆಗೆ ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಅನ್ನೋ ಬಗ್ಗೆ ಗಣತಿಯನ್ನು ಮಾಡಲಾಯ್ತು. ದೇಶದಲ್ಲಿ 2018ರಲ್ಲಿ 2,967 ಹುಲಿಗಳಿದ್ದರೆ, 2023ರಲ್ಲಿ 3,167ಕ್ಕೆ ಏರಿಕೆಯಾಗಿತ್ತು. ಸದ್ಯ ಕರ್ನಾಟಕದಲ್ಲಿ 563 ಹುಲಿಗಳಿದ್ದು, ದೇಶದಲ್ಲಿ 2ನೇ ಸ್ಥಾನದಲ್ಲಿದೆ.
ಕಳೆದ ವರ್ಷ ವನ್ಯ ಜೀವಿ ರಕ್ಷಣಾ ಸಂಘ ಬಿಡುಗಡೆ ಮಾಡಿದ್ದ ವರದಿ ಪ್ರಕಾರ, 2023ರ ಜನವರಿಯಿಂದ ಡಿಸೆಂಬರ್ 25ರವರೆಗೆ ಭಾರತದಲ್ಲಿ 202 ಹುಲಿಗಳು ದೇಶದಲ್ಲಿ ಸಾವನ್ನಪ್ಪುತ್ತಿವೆ ಅನ್ನೋ ಶಾಕಿಂಗ್ ಅಂಶ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ 52 ಹುಲಿಗಳು ಸಾವನ್ನಪ್ಪಿದ್ರೆ, ಮಧ್ಯಪ್ರದೇಶದಲ್ಲಿ 45, ಉತ್ತರಾಖಂಡದಲ್ಲಿ 26 ಹುಲಿಗಳು ಸಾವನ್ನಪ್ಪಿವೆ.
ಹುಲಿ ಸಂರಕ್ಷಣಾ ಯೋಜನೆ, ವನ್ಯಜೀವಿ ರಕ್ಷಣಾ ಕಾಯ್ದೆ ಜಾರಿಯಲ್ಲಿದ್ರೂ, ವನ್ಯಜೀವಿಗಳ ಬೇಟೆ ಪ್ರವೃತ್ತಿ ಕಡಿಮೆಯಾಗಿಲ್ಲ ಅನ್ನೋದು ದುರಂತ.