ಪಾರ್ವತಿಯ ಮೈ ಕೊಳೆಯಿಂದ ಸ್ಥಾಪಿತನಾದ ಗಣಪತಿ, ತನ್ನ ತಾಯಿ ಸ್ನಾನ ಮಾಡಿ ಬರುವುದನ್ನು ಕಾಯುವ ಸಮಯದಲ್ಲಿ ಶಿವನ ಬಳಿ ಯುದ್ಧ ಮಾಡಿ, ಶಿವನಿಂದ ತಲೆ ಕಡಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಾದ ಬಳಿಕ ಗಣಪತಿಗೆ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ ಆನೆಯ ಮುಖವನ್ನ ತಂದು ಸೇರಿಸಿ, ಪ್ರಥಮ ವಂದಿತನನ್ನಾಗಿ ವರ ನೀಡಿದ ಕಥೆಯೂ ಗೊತ್ತಿದೆ. ಆದ್ರೆ ಗಣಪತಿಯ ತಲೆ ಎಲ್ಲಿ ಹೋಯಿತು, ಏನಾಯಿತು ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಅಥವಾ ಶುಭಕಾರ್ಯ ಮಾಡುವ ಮೊದಲು ನಾವೆಲ್ಲ ಗಣೇಶನನ್ನು ಪೂಜಿಸುತ್ತೇವೆ. ಪ್ರಥಮ ಪೂಜಿತ ಶ್ರೀಗಣೇಶ, ಎಲ್ಲ ವಿಘ್ನಗಳನ್ನು ತೊಡೆದು ಹಾಕಿ, ಒಳ್ಳೆಯದು ಮಾಡಲೆಂದು ಪೂಜಿಸಲಾಗುತ್ತದೆ. ಪಾರ್ವತಿ ದೇವಿ ಸ್ನಾನಕ್ಕೆ ಹೋಗುವ ಮುನ್ನ ತನ್ನ ಮೈ ಕೊಳೆಯನ್ನು ತೆಗೆದು ಆ ಮಣ್ಣಿನಿಂದ ಬಾಲಕನ ಮೂರ್ತಿಯೊಂದನ್ನ ಮಾಡಿ, ಅದಕ್ಕೆ ಜೀವ ತುಂಬುತ್ತಾಳೆ. ಮತ್ತು ತಾನು ಸ್ನಾನ ಮಾಡಿ ಬರುವವರೆಗೂ, ಯಾರನ್ನೂ ಒಳಗೆ ಬಿಡಬಾರದೆಂದು ಹೇಳುತ್ತಾಳೆ.
ಅದೇ ರೀತಿ ಗಣೇಶ ಬಾಗಿಲು ಕಾಯುತ್ತ ಕೂತಿರುತ್ತಾನೆ. ಅಷ್ಟೊತ್ತಿಗೆ ಶಿವ ಪಾರ್ವತಿಯ ಕೋಣೆಗೆ ಹೋಗುವಾಗ ಗಣೇಶ ತಡೆಯುತ್ತಾನೆ. ಅಲ್ಲಿ ಗಣೇಶನಿಗೂ ಶಿವನಿಗೂ ಮಾತಿನ ಚಕಮಕಿ ನಡೆಯುತ್ತದೆ. ಸಿಟ್ಟಿಗೆದ್ದ ಶಿವ ಗಣೇಶನ ರುಂಡ ಕತ್ತರಿಸುತ್ತಾನೆ. ಸ್ನಾನ ಮಾಡಿ ಬಂದ ಪಾರ್ವತಿ ಗಣೇಶನ ನರಳಾಟ ನೋಡಿ, ಶಿವನ ಮೇಲೆ ಕೋಪಗೊಳ್ಳುತ್ತಾಳೆ. ಮತ್ತು ತನ್ನ ಮಗನನ್ನು ಬದುಕಿಸಿ ಕೊಡಬೇಕೆಂದು ಕೇಳುತ್ತಾಳೆ. ಪಾರ್ವತಿಯ ಕೋಪ ಕಂಡ ಶಿವ ಆಕೆಯನ್ನು ಶಾಂತಗೊಳಿಸಲು, ಶಿವ ಗಣಗಳನ್ನು ಕರೆಸಿ, ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದ ಆನೆಯ ರುಂಡ ತರಲು ಹೇಳುತ್ತಾನೆ.
ಆ ರುಂಡವನ್ನು ತಂದು ಗಣೇಶನ ಮುಂಡಕ್ಕೆ ಸೇರಿಸುತ್ತಾರೆ. ದೇವತೆಗಳೆಲ್ಲರೂ ಬಂದು ಗಣೇಶನನ್ನು ಹರಸುತ್ತಾರೆ. ಶಿವ ಗಣೇಶನಿಗೆ ಪ್ರಥಮ ಪೂಜಿತನಾಗುವಂತೆ ವರ ನೀಡುತ್ತಾನೆ. ಆದ್ರೆ ಗಣೇಶನಿಗೆ ಈ ವರ ಸಿಗುವ ಮೊದಲು, ಶಿವ ಅವನ ರುಂಡವನ್ನು ಕತ್ತರಿಸಿದ್ದ. ನಂತರ ಆನೆಯ ಮುಖ ಸೇರಿಸಿದ್ದರು. ಆದ್ರೆ ಗಣೇಶನ ನಿಜವಾದ ರುಂಡ ಎಲ್ಲಿದೆ ಎಂದು ಹಲವರಿಗೆ ಗೊತ್ತಿಲ್ಲ.
ಗಣೇಶನ ನಿಜವಾದ ರುಂಡ, ಪಾತಾಳ ಭುವನೇಶ್ವರ ಗುಹೆಯಲ್ಲಿ ಗಣೇಶನ ನಿಜವಾದ ರುಂಡವಿದೆ ಎಂದು ಹೇಳಲಾಗುತ್ತದೆ. ಶಿವ ಗಣೇಶನ ರುಂಡ ಕತ್ತರಿಸಿದ ಮೇಲೆ, ಸ್ವತಃ ಶಿವನೇ ಆ ರುಂಡವನ್ನು ತಂದು ಈ ಗುಹೆಯಲ್ಲಿ ಇರಿಸಿದ್ದನಂತೆ. ಇಲ್ಲಿನ ಗಣೇಶನನ್ನು ಜನ ಆದಿ ಗಣೇಶನೆಂದು ಪೂಜಿಸುತ್ತಾರೆ. ಇಲ್ಲಿ ಲಿಂಗರೂಪದಲ್ಲಿ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಉತ್ತರಾಖಂಡದ ಪಿತೋರಾಘಡ್ ಎಂಬಲ್ಲಿ ಈ ಗುಹೆಯಿದೆ. ಈಗಲೂ ಈ ಗಣಪನ ರುಂಡವನ್ನು ಶಿವನೇ ಕಾಪಾಡುತ್ತಿದ್ದಾನೆಂದು ಹಲವರು ಹೇಳುತ್ತಾರೆ.




