ಚಪ್ಪಲಿ ಧರಿಸಿಯೇ ತಿರುಪತಿ ತಿಮ್ಮಪ್ಪನ ಆವರಣದಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ನಟಿ ನಯನತಾರಾ ಹಾಗೂ ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಭಾನುವಾರ ಕ್ಷಮೆಯಾಚಿಸಿದ್ದಾರೆ.
ಪ್ರೀತಿಸಿ ಮದುವೆಯಾದ ನಯನತಾರಾ ವಿಘ್ನೇಶ್ ಜೋಡಿ, ಶನಿವಾರ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಅಚಾತುರ್ಯ ನಡೆದಿತ್ತು. ನಯನತಾರಾ ತಿಳಿಯದೇ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿ ಪೋಟೊ ಶೂಟ್ ನಡೆಸಿದ್ದರು.
ಚಪ್ಪಲಿ ಧರಿಸಿದ್ದ ಅವರ ಪೋಟೊ ವೈರಲ್ ಆದ ಬಳಿಕ, ದೇವಸ್ಥಾನ ಆಡಳಿತ ಮಂಡಳಿಯು ಕಾನೂನು ಕ್ರಮದ ಎಚ್ಚರಿಕೆ ನೀಡಿ ನೋಟಿಸ್ ಕಳಿಸಿತ್ತು. ಹಾಗಾಗಿ ‘ಅದು ತಿಳಿಯದೇ ಆಗಿರುವ ಪ್ರಮಾದ. ಕ್ಷಮೆಯಾಚಿಸುತ್ತೇನೆ. ಇನ್ನುಮುಂದೆ ಅಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳತ್ತೇವೆ’ ಎಂದು ನಯನತಾರಾ ವಿಘ್ನೇಶ್ ದಂಪತಿ ಭರವಸೆ ನೀಡಿದ್ದಾರೆ.
ನಮಗೆ ಬಾಲಾಜಿ ಅಚ್ಚುಮೆಚ್ವಿನ ದೇವರು. ತಿರುಪತಿಯಲ್ಲಿಯೇ ಮದುವೆ ಮಾಡಿಕೊಳ್ಳುವ ತಯಾರಿ ಮಾಡಿದ್ದೆವು. ಆದರೆ ಕೊನೆ ಘಳಿಗೆ ಕೆಲವು ಅನಿವಾರ್ಯ ಕಾರಣಕ್ಕೆ ಚೆನ್ನೈಗೆ ಸ್ಥಳ ಬದಲಾಯಿತು. ಮದುವೆ ಮುಗಿದ ಬಳಿಕ, ನಮ್ಮ ಆರಾಧ್ಯ ದೈವನ ದರ್ಶನ ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.