ಇಡೀ ದೇಶದ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗಿದೆ. ರಾಜ್ಯದ 243 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ 2ನೇ ಹಂತ, ನಾಳೆ ನಡೆಯಲಿದೆ. ನವೆಂಬರ್ 14ರಂದು ಎಲೆಕ್ಷನ್ ರಿಸಲ್ಟ್ ಪ್ರಕಟವಾಗಲಿದೆ.
ಕೊನೆ ಹಂತದ ಪ್ರಚಾರದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ವಿಧಾನಸಭಾ ಚುನಾವಣೆ, ಎಲ್ಲಾ ಪಕ್ಷಗಳ ಪ್ರಭಾವಿಗಳ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು 14 ದಿನಗಳ ಪ್ರಚಾರ, ರೋಡ್ ಶೋಗಳನ್ನು ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ಎಂಪಿ ಸಿಎಂ ಮೋಹನ್ ಯಾದವ್ ಸಹ ಕ್ಯಾಂಪೇನ್ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ 10 ರ್ಯಾಲಿಗಳಲ್ಲಿ ಭಾಗಿಯಾಗಿದ್ದಾರೆ. ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ರು. ಆರ್‌ಜೆಡಿ ಪರ ತೇಜಸ್ವಿ ಯಾದವ್ ಸಹ ಮತದಾರನ ಸೆಳೆಯುವ ಕೆಲಸ ಮಾಡಿದ್ದಾರೆ.
ಆದರೆ, ಚುನಾವಣಾ ಪ್ರಚಾರದ ಉದ್ದಕ್ಕೂ ಸಿಎಂ ನಿತೀಶ್ ಕುಮಾರ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಪ್ರಧಾನಿ ಮೋದಿ ಅವರ ಮೊದಲ ಪ್ರಚಾರದಲ್ಲಿ ಮತ್ತು ಒಂದೆರಡು ರೋಡ್ ಶೋಗಳಲ್ಲಿ ಮಾತ್ರ ಭಾಗಿಯಾಗಿದ್ದರು. ಇದನ್ನು ಬಿಟ್ರೆ ನಿತೀಶ್ ಕುಮಾರ್ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲೇ ಇಲ್ಲ. ಹೀಗಾಗಿ ನಿತೀಶ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂಬ ಸುದ್ದಿ ಹರಿದಾಡ್ತಿದೆ.

