Wednesday, April 30, 2025

Latest Posts

ಭಾರತ ದಾಳಿಯ ಭೀತಿ : ಪಾಕ್‌ ಅಲರ್ಟ್‌, ನೋ ಫ್ಲೈಯಿಂಗ್‌ ಝೋನ್..!

- Advertisement -

ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಪರಗ್ವಾಲ್ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಗುಂಡು ಹಾರಿಸಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆಯು ಸತತ ಆರನೇ ದಿನದ ರಾತ್ರಿಯೂ ಎಲ್‌ಒಸಿ ಉದ್ದಕ್ಕೂ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇದಕ್ಕೆ ಭಾರತೀಯ ಸೇನೆಯಿಂದಲೂ ತಕ್ಕ ಉತ್ತರ ರವಾನೆಯಾಗಿದೆ.

ಬಾರಾಮುಲ್ಲಾ ಮತ್ತು ಕುಪ್ವಾರಗಳಲ್ಲಿಯೂ ಪಾಕಿಸ್ತಾನ ಶಸ್ತ್ರಾಸ್ತ್ರಗಳ ಸಮೇತ ಗುಂಡಿನ ದಾಳಿಯನ್ನು ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ತ್ವರಿತವಾಗಿ ಪ್ರತಿಕ್ರಿಯೆ ನೀಡಿದೆ. ಕಳೆದ ಏಪ್ರಿಲ್ 29-30 ರಾತ್ರಿ ಹಿಂದಿನ ಪರಿಸ್ಥಿತಿಯ ಜೊತೆಗೆ, ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳ ನಿಯಂತ್ರಣ ರೇಖೆಯಾದ್ಯಂತ ಮತ್ತು ಪರಗ್ವಾಲ್ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ಸೇನೆ ಅಪ್ರಚೋದಿತ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನಾ ಪಡೆಗಳೂ ಸಹ ತಮ್ಮದೇ ಆದ ರೀತಿಯಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿವೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪರಗ್ವಾಲ್‌ ಸೆಕ್ಟರ್..

ಮಂಗಳವಾರ ತನಕ ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯಲ್ಲಿ ಮಾತ್ರ ಕದನ ವಿರಾಮ ಉಲ್ಲಂಘಿಸುತ್ತಿತ್ತು, ಆದರೆ ಈಗ ಜಮ್ಮುವಿನ ಪರಗ್ವಾಲ್ ಸೆಕ್ಟರ್‌ನಲ್ಲಿ ನಿನ್ನೆ ರಾತ್ರಿ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತರರಾಷ್ಟ್ರೀಯ ಗಡಿಗಳಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಪಾಕಿಸ್ತಾನದ ಈ ನಡೆಯಿಂದ ಪರಿಸ್ಥಿತಿಯು ಉಲ್ಬಣಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಎಲ್‌ಒಸಿ ಉದ್ದಕ್ಕೂ, ಪಾಕಿಸ್ತಾನವು ಸತತ ಆರನೇ ರಾತ್ರಿಯೂ ಜಮ್ಮು ಮತ್ತು ಕಾಶ್ಮೀರದ ವಿವಿಧ ವಲಯಗಳಲ್ಲಿ ಈ ಬಾರಿ ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ವಲಯಗಳಲ್ಲಿ ಶಸ್ತ್ರಾಸ್ತ್ರಗಳ ಮೂಲಕ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ಪ್ರತಿದಾಳಿ ನಡೆಸುವ ಮೂಲಕ ಗಟ್ಟಿಯಾದ ಉತ್ತರ ನೀಡಿದೆ.

ನೋ ಫ್ಲೈಯಿಂಗ್‌ ಝೋನ್..!

ಭಾರತವು ಪಾಕಿಸ್ತಾನದ ಮೇಲೆ ಮುಂದಿನ 24 ರಿಂದ 36 ಗಂಟೆಗಳಲ್ಲಿ ಭೀಕರ ಮಿಲಿಟರಿ ಕಾರ್ಯಾಚರಣೆಯನ್ನು ಮಾಡಲು ಸಿದ್ಧವಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಪ್ರಮಾಣದ ಹಾನಿ ಹಾಗೂ ಪರಿಣಾಮವಾಗಲಿದೆ ಎಂದು ಅಲ್ಲಿನ ಮಾಹಿತಿ ಮತ್ತು ಪ್ರಸಾರ ಸಚಿವ ಅತ್ತಾವುಲ್ಲಾ ತರಾರ್‌ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅಲರ್ಟ್‌ ಆಗಿರುವ ಪಾಪಿಸ್ತಾನ ಎಲ್ಲ ವಿಮಾನಗಳ ಹಾರಾಟವನ್ನು ನಿರ್ಬಂಧಗೊಳಿಸಿದೆ. ಅಲ್ಲದೆ ಮೇ 2ರ ವರೆಗೆ ನೋ ಫ್ಲೈಯಿಂಗ್‌ ಝೋನ್‌ ಎಂದು ಘೋಷಿಸಿದೆ. ಈ ಮೂಲಕ ಭಾರತದ ದಾಳಿಯಿಂದ ತಪ್ಪಿಸಿಕೊಳ್ಳಲು ಪಾಕ್‌ ಮುಂದಾಗಿದೆ.

ಸೇನೆಗೆ ಮೋದಿ ಪವರ್..!

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ . ಬೈಸರನ್ ಹುಲ್ಲುಗಾವಲಿನಲ್ಲಿ ತಮ್ಮ ಧರ್ಮವನ್ನು ಗುರುತಿಸಿದ ನಂತರ ಭಯೋತ್ಪಾದಕರು 26 ಜನರನ್ನು ಕೊಂದಿದ್ದು, ಜಾಗತಿಕವಾಗಿ ಖಂಡನೆ ಮತ್ತು ಪ್ರತೀಕಾರಕ್ಕೆ ಒತ್ತಾಯಗಳು ಜೋರಾಗಿವೆ.

ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಭಾರತವು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಭೂಮಿಯ ಆಳದವರೆಗೂ ಹುಡುಕಿ ಹುಡುಕಿ ಮಟ್ಟ ಹಾಕುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಬಳಿಕ ಹಲವಾರು ರಾಜತಾಂತ್ರಿಕ ಕಠಿಣ ಕ್ರಮಗಳನ್ನು ಭಾರತ ಪಾಕಿಸ್ತಾನದ ವಿರುದ್ಧ ಕೈಗೊಂಡಿತ್ತು. ಅಲ್ಲದೆ ಮಂಗಳವಾರ ರಾತ್ರಿ ರಕ್ಷಣಾ ಸಚಿವರು ಸೇರಿದಂತೆ ಸೇನಾ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ಇಡೀ ಕಾರ್ಯಾಚರಣೆಯ ಜವಾಬ್ದಾರಿಯನ್ನು ಸೇನೆಗೆ ವಹಿಸಿದ್ದರು. ಸಮಯ. ಗುರಿಯನ್ನು ನೀವೇ ನಿರ್ಧಾರ ಮಾಡಿ ಎಂದು ಸೇನೆಯ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿಯೇ ಪಾಕಿಸ್ತಾನಕ್ಕೆ ದಾಳಿಯ ಭೀತಿ ಎದುರಾಗಿದ್ದು, ಒಬ್ಬೊಬ್ಬರಂತೆ ನಾಯಕರು ದೇಶವನ್ನು ತೊರೆಯುತ್ತಿದ್ದಾರೆ.

- Advertisement -

Latest Posts

Don't Miss