Political News: ಹಲವು ದೇಶಗಳಿಗೆ ಈಗಾಗಲೇ ನಮ್ಮ ನಂದಿನಿ ಉತ್ಪನ್ನಗಳು ರಫ್ತಾಗುತ್ತಿದೆ. ಇದೀಗ ಇನ್ನೂ ಹಲವು ದೇಶಗಳಿಗೆ ನಂದಿನಿ ತುಪ್ಪ ರಫ್ತಾಗಲು ರೆಡಿಯಾಗಿದೆ. ಈ ಕಾರಣಕ್ಕೆ ಸಂತಸ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡದ ಅಪ್ಪಟ ಬ್ರ್ಯಾಂಡ್ ನಂದಿನಿಯ ಘಮಲು ಜಗದಗಲ ವ್ಯಾಪಿಸುತ್ತಿದೆ ಎಂದಿದ್ದಾರೆ.
ಪ್ರಸ್ತುತ ದುಬೈ, ಕತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾಪುರ್ ದೇಶಗಳು ಸೇರಿದಂತೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ನೆರೆಯ ರಾಷ್ಟ್ರಗಳಲ್ಲಿ ನಂದಿನಿ ಬ್ರ್ಯಾಂಡ್‌ಗೆ ಡಿಮ್ಯಾಂಡ್ ಹೆಚ್ಚಿದೆ. ಹೀಗಾಗಿಯೇ ನಂದಿನಿ ಯುಹೆಚ್‌ಟಿ ಟೆಟ್ರಾಪ್ಯಾಕ್ ಹಾಲು, ತುಪ್ಪ, ಚೀಸ್, ಬೆಣ್ಣೆ, ಐಸ್‌ಕ್ರೀಂ, ಸುವಾಸಿತ ಹಾಲು, ಸಿಹಿ ಉತ್ಪನ್ನ, ಸೇವರಿಸ್ ಅನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಇದೀಗ ವಿದೇಶದಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲು ಕೆಎಂಎಫ್ ಕ್ರಮ ವಹಿಸಿದೆ ಎಂದು ಸಿಎಂ ಹೇಳಿದರು.
2023ರ ಸೆಪ್ಟೆಂಬರ್ 9ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ)ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೊದಲ ʼನಂದಿನಿ ಕೆಫೆ ಮೂʼ ಅನ್ನು ಆರಂಭಿಸಿ, ತುಪ್ಪ, ಬೆಣ್ಣೆ, ಚೀಸ್, ಯುಹೆಚ್‌ಟಿ ಹಾಲು, ಐಸ್‌ಕ್ರೀಂ, ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ಅಲ್ಲಿ ನೆಲೆಸಿರುವ ಕನ್ನಡಿಗರು ಸೇರಿದಂತೆ ಅಲ್ಲಿನ ಪ್ರಜೆಗಳು ಕೂಡ ನಮ್ಮ ಕನ್ನಡದ ಬ್ರ್ಯಾಂಡ್ ಉತ್ಪನ್ನಗಳನ್ನು ಕೊಳ್ಳಲು ಪ್ರಾರಂಭಿಸಿದ್ದರಿಂದ ಮಾರುಕಟ್ಟೆ ವಿಸ್ತರಣೆಯಾಯಿತು.
ಬಳಿಕ 2025ರ ಆಗಸ್ಟ್ 29 ರಿಂದ ಆಗಸ್ಟ್ 31ರ ವರೆಗೆ ಯುಎಸ್‌ಎಯಲ್ಲಿನ ಲೇಕ್‌ಲ್ಯಾಂಟ್ ಪ್ಲೋರಿಡಾದಲ್ಲಿ ಆಯೋಜಿಸಲಾಗಿದ್ದ ನಾವಿಕ (ನಾವು ವಿಶ್ವ ಕನ್ನಡಿಗರು) ವಿಶ್ವ ಕನ್ನಡ ಸಮಾವೇಶದಲ್ಲಿ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡು ಹೊಸ ವಿನ್ಯಾಸದ ನಂದಿನಿ ತುಪ್ಪ ಹಾಗೂ ಸಿಹಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ, ಇಂದಿನಿಂದ ನಂದಿನಿ ಉತ್ಪನ್ನಗಳು ಅಮೆರಿಕಾದಲ್ಲೂ ಲಭ್ಯವಿರುವುದಾಗಿ ಘೋಷಿಸಿದರು. ವಿಶೇಷವಾಗಿ ನಂದಿನಿ ಪೇಡ, ಮೈಸೂರು ಪಾಕ್, ಬರ್ಫಿ ಹಾಗೂ ಸೇವರಿಸ್ ಉತ್ಪನ್ನಗಳಿಗೆ ಅಲ್ಲಿ ಹೆಚ್ಚು ಬೇಡಿಕೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೀಗ ಸೌದಿ ಅರೇಬಿಯಾದಿಂದ 8 ಮೆಟ್ರಿಕ್ ಟನ್, ಯುಎಸ್‌ಎನಿಂದ 5 ಮೆಟ್ರಿಕ್ ಟನ್ ಹಾಗೂ ಆಸ್ಟ್ರೇಲಿಯಾದಿಂದ 1 ಮೆಟ್ರಿಕ್ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಇಂದಿನಿಂದ ಈ ಮೂರು ದೇಶಗಳಿಗೆ ತುಪ್ಪ ಪೂರೈಕೆಗೆ ಅಧಿಕೃತ ಚಾಲನೆ ಸಿಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

