Hubli News: ಹುಬ್ಬಳ್ಳಿ: ಬದುಕನ ಸಾರ ನಿಜವಾಗಿಯೂ ಸಂಭ್ರಮಿ ಸುವುದರಲ್ಲೇ ಕಿಕ್ ಇದೆ. ಅದನ್ನು ಬಿಟ್ಟು ಮಾದಕವಸ್ತು ವ್ಯಸನಕ್ಕೆ ಯಾರೂ ದಾಸರಾಗಬಾರದು’ ಎಂದು ನಟ ಶಿವರಾಜ್ ಕುಮಾರ್ ಸಲಹೆ ನೀಡಿದರು.
ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹು-ಧಾ ಪೊಲೀಸ್ ಕಮಿಷನರೇಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಜನ್ಮ ದೇವರು ನೀಡುವ ಅಮೂಲ್ಯವಾದ ಉಡುಗೊರೆ. ಅದನ್ನು ಜವಾಬ್ದಾರಿಯಿಂದ ಕಾಪಾಡಿ ಕೊಳ್ಳಬೇಕು. ಅದಕ್ಕಾಗಿ ಮಾದಕವಸ್ತು ವ್ಯಸನದಿಂದ ದೂರವಿರುವುದು ಒಳ್ಳೆಯದು. ನೀವು ಎಚ್ಚೆತ್ತುಕೊಂಡು, ಸ್ನೇಹಿತರಿಗೂ ಜಾಗೃತಿ ಮೂಡಿಸಬೇಕು. ಅಗತ್ಯ ಸಂದರ್ಭದಲ್ಲಿ ಪೊಲೀಸರಿಗೂ ಮಾಹಿತಿ ನೀಡಬೇಕು’ ಎಂದರು.
‘ನಶೆಯನ್ನು ಯಾವುದೋ ವಸ್ತುವಿನಲ್ಲಿ ಹುಡುಕುವ ಬದಲು ಗೆಳೆತನ, ಸಂಬಂಧ, ಓದು, ಕ್ರೀಡೆಯಲ್ಲಿ ಹುಡುಕಬೇಕು. ಪ್ರಾಮಾಣಿಕವಾಗಿ ಬದುಕುವ ರೀತಿಯಲ್ಲೂ ನಶೆ ಇದೆ. ಮಾದಕ ವಸ್ತು ವ್ಯಸನದಿಂದ ಬದುಕು ಹಾಳಾಗುತ್ತದೆ. ತಂದೆ-ತಾಯಿ ಆಸೆ ಈಡೇರಿಸಲು ಶ್ರಮಿಸಬೇಕು. ಒಳ್ಳೆತನಕ್ಕೆ ಹೋರಾಡಬೇಕು. ಸಂತೋಷದಿಂದ ಬದುಕಬೇಕು’ ಎಂದು ಕಿವಿಮಾತು ಹೇಳಿದರು.
ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ‘ಮಾದಕ ವಸ್ತು ವ್ಯಸನವೆಂಬುದು ಗೆದ್ದಲಹುಳದಂತೆ ವ್ಯಕ್ತಿಯ ಬದುಕನ್ನೇ ನಾಶ ಮಾಡುತ್ತದೆ’ ಎಂದರು. ಗೀತಾ ಶಿವರಾಜ್ ಕುಮಾರ್, ಕಾಲೇಜಿನ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಇದೇ ಸಮಯದಲ್ಲಿಹಾಡು ಹಾಡಿ, ‘ಟಗರು’ ಹಾಡಿಗೆ ನೃತ್ಯ ಮಾಡಿ ರಂಜಿಸಿದರು.ವಿದ್ಯಾರ್ಥಿಗಳು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು.