ಶಿಕ್ಷಕಿಯ ಮೇಲೆ ಪೋಷಕರೊಬ್ಬರು ಥಳಿಸಿರುವ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕಿ ಮಂಜುಳಾ ಬಂಗಾರಪೇಟೆ ತಾಲೂಕಿನ ಪಲವತಿಮ್ಮನಹಳ್ಳಿ ಗ್ರಾಮದ ನಿವಾಸಿ. ಕ್ಷೇತ್ರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡ್ತಿದ್ರು.
ಸೆಪ್ಟೆಂಬರ್ 11ರಂದು ಎಂದಿನಂತೆ, 6ನೇ ತರಗತಿ ಕೊಠಡಿಗೆ ಮಂಜುಳಾ ಬಂದಿದ್ರು. ವಿದ್ಯಾರ್ಥಿಗಳ ಹಾಜರಾತಿಯನ್ನು ಪಡೆಯುತ್ತಿದ್ರು. ಈ ವೇಳೆ 2 ದಿನಗಳಿಂದ ಗೈರಾಗಿದ್ದ ವಿದ್ಯಾರ್ಥಿ ಶಾಲೆಗೆ ಹಾಜರಾಗಿದ್ದ. ಗೈರಾಗಿದ್ದಕ್ಕೆ ಕಾರಣ ಕೇಳಿ, ಕನ್ನಡ ಪರೀಕ್ಷೆ ಇದ್ದು, ಹೇಗೆ ಬರೆಯುತ್ತಿಯಾ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿ, ನಾನು ಓದಿಲ್ಲ, ಪರೀಕ್ಷೆ ಬರೆಯಲ್ಲ ಅಂತಾ ಉತ್ತರಿಸಿದ್ದಾನೆ. ಕೋಪಗೊಂಡ ಶಿಕ್ಷಕಿ ಕೈಯಿಂದ ವಿದ್ಯಾರ್ಥಿ ಕೈಗೆ ಹೊಡೆದಿದ್ದಾರೆ.
ಕೋಲು ತೆಗೆದುಕೊಳ್ಳಲು ಮುಂದಾದಾಗ, ತಾಯಿಯನ್ನು ಕರೆದುಕೊಂಡು ಬರುವುದಾಗಿ ಶಾಲೆಯಿಂದಲೇ ಓಡಿದ್ದಾನೆ. ಕೆಲ ನಿಮಿಷಗಳ ಬಳಿಕ ತಂದೆಯೊಂದಿಗೆ, ಆ ವಿದ್ಯಾರ್ಥಿ ಬಂದಿದ್ದ. ಕೋಪದಲ್ಲಿದ್ದ ಚೌಡಯ್ಯ, ಶಿಕ್ಷಕಿಯನ್ನು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಶಿಕ್ಷಕಿಯನ್ನು ಹಿಡಿದು ಎಳೆದಾಡಿ, ಕಬ್ಬಿಣದ ಬಾಗಿಲಿನತ್ತ ತಳ್ಳಿದ್ದಾರೆ. ಬಾಗಿಲಿಗೆ ಬಡಿದಿದ್ರಿಂದ ಶಿಕ್ಷಕಿಯ ತಲೆಗೆ ಪೆಟ್ಟಾಗಿದೆ. ಬೆನ್ನಿಗೂ ಏಟಾಗಿದೆ. ಬಳಿಕ ಕಾಲಿನಿಂದಲೂ ಒದ್ದು ಹಲ್ಲೆ ಮಾಡಿದ್ದಾನೆ. ಹೀಗಂತ ದೂರಿನಲ್ಲಿ ಶಿಕ್ಷಕಿ ಮಂಜುಳಾ ಉಲ್ಲೇಖಿಸಿದ್ದಾರೆ. ಸದ್ಯ, ಗಾಯಾಳು ಶಿಕ್ಷಕಿ ಮಾಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

