ಮುಷ್ಕರವನ್ನು ಕೈ ಬಿಟ್ಟಿಲ್ಲ.. ಕೇವಲ ಮುಂದೂಡಿದ್ದೇವೆ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರೇ ಈ ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಅಷ್ಟೇ. ಸಾಧ್ಯವಾದರೆ ಈ ಕ್ಷಣದಿಂದಲೇ ನೌಕರರು ಕೆಲಸಕ್ಕೆ ಹಾಜರಾಗಿ ಅಂತಾ, ಅನಂತ ಸುಬ್ಬರಾವ್ ಅವರು ಕರೆ ಕೊಟ್ಟಿದ್ದಾರೆ.
ನಾವು ಇಷ್ಟು ತಿಂಗಳಿಂದಲೇ ಕಾದಿದ್ದೇವೆ. ಹೈಕೋರ್ಟ್ ವಿಚಾರಣೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಆಗಸ್ಟ್ 7ರ ವಿಚಾರಣೆ ವೇಳೆ, ಸರ್ಕಾರಕ್ಕೆ ನಿರ್ದೇಶನ ನೀಡಿ ಅಂತಾ, ಹೈಕೋರ್ಟನ್ನೇ ನಾವು ಕೇಳ್ತೀವಿ. ಕೈಗಾರಿಕಾ ಶಾಂತಿ ನೆಲಸುವಂತೆ ಮಾಡಿ ಅಂತಾ ಮನವಿ ಮಾಡ್ತೀವಿ. ಮುಷ್ಕರ ಮುಂದೂಡಿದ್ರಿಂದ ಎಸ್ಮಾ ಕಾಯ್ದೆ ಉಲ್ಲಂಘಿಸಿದಂತೆ ಆಗಿಲ್ಲ ಅಂತಾ, ಅನಂತ ಸುಬ್ಬರಾವ್ ಹೇಳಿದ್ರು.
ನಾವು ಕೆಲಸ ಮಾಡಿದ್ದೇವೆ. ಕೆಲಸ ಮಾಡಿದ್ದಕ್ಕಾಗಿಯೇ ಕೇಳಿದ್ದೇವೆ. ನಮ್ಮಿಂದ ಯಾವುದೇ ನಷ್ಟವಾಗಿಲ್ಲ. ಅದು ಅವರಿಗೂ ಗೊತ್ತಿದೆ. ನಾವು ಭವಿಷ್ಯಕ್ಕಾಗಿ ಕಾಯುತ್ತಿಲ್ಲ. ವರ್ತಮಾನದಲ್ಲಿ ಎಲ್ಲವನ್ನೂ ಕೇಳ್ತಿದ್ದೀವಿ. ಇಲ್ಲಿ ಸೋಲು ಗೆಲುವು ಅನ್ನೋ ಪ್ರಶ್ನೆಯೇ ಇಲ್ಲ. ಎಲ್ಲರೂ ಗೆದ್ದಿದ್ದೇವೆ ಅಷ್ಟೆ.
ನಿನ್ನೆ ಆಗದಿರುವುದು ನಾಳೆ ಆಗಬಹುದು. ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಅಂತಾ, ಅನಂತ ಸುಬ್ಬರಾವ್ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಸತ್ತಾತ್ಮಕ ಸರ್ಕಾರ ಎಸ್ಮಾವನ್ನು ಬಳಸಬಾರದು. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲೂಬಾರದು. ಸಮಸ್ಯೆ ಬಗೆಹರಿಯದಿದ್ರೆ ಅಶಾಂತಿ ಇದ್ದೇ ಇರುತ್ತೆ. ಜಂಟಿ ಕ್ರಿಯಾ ಸಮಿತಿ, ಸದಾ ಕಾಲ ಸಾರಿಗೆ ನೌಕರರ ಪರವಾಗೇ ಇರುತ್ತದೆ. ಹೀಗಂತ ಜಂಟಿ ಕ್ರಿಯಾ ಸಮಿತಿ ಸದಸ್ಯರು ಹೇಳಿದ್ರು.
ಒಟ್ನಲ್ಲಿ, ಆಗಸ್ಟ್ 7ರವರೆಗೆ ತಾತ್ಕಾಲಿಕವಾಗಿ ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್ ಬಿದ್ದಿದೆ. ಮುಂದಿನ ಹೋರಾಟ ಹೈಕೋರ್ಟ್ ಆದೇಶದ ಮೇಲೆ ನಿರ್ಧಾರವಾಗಲಿದೆ. ಅಷ್ಟರಲ್ಲಿ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ರೆ ಒಳಿತು ಅಂತಾ, ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.