ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರಿಗೆ, ಕಳೆದ 15 ತಿಂಗಳಿಂದ ಸಂಬಳವಾಗಿರಲಿಲ್ಲ. ಕಾರ್ಯಕ್ರಮವೊಂದರ ನಿಮಿತ್ತ ಶಾಲೆಗೆ ಭೇಟಿ ಕೊಟ್ಟಿದ್ದಾಗ, ಶಿಕ್ಷಕರ ಸಮಸ್ಯೆ ಬಗ್ಗೆ ಗೊತ್ತಾಗಿದೆ. ತಕ್ಷಣವೇ ಬಾಕಿ ಸಂಬಳವನ್ನ ಕೊಡುವುದಾಗಿ ಘೋಷಿಸಿದ್ರು.
ಅಂದು ಕೊಟ್ಟಿದ್ದ ಮಾತನ್ನ ಇಂದು ಹೆಚ್‌ಡಿಕೆ ಪೂರೈಸಿದ್ದಾರೆ. ಶಿಕ್ಷಕರ ಸಂಬಳಕ್ಕಾಗಿ ಬರೋಬ್ಬರಿ 19 ಲಕ್ಷದ 94 ಸಾವಿರದ 200 ರೂಪಾಯಿಗಳನ್ನು ಹೆಚ್‌ಡಿ ಕುಮಾರಸ್ವಾಮಿ ಕೊಟ್ಟಿದ್ದಾರೆ.

ಬಳಿಕ ಮಾತನಾಡಿರುವ ಹೆಚ್‌ಡಿಕೆ, ಮೈಶುಗರ್ ಶಾಲಾ ಶಿಕ್ಷಕರಿಗೆ ಸಂಬಳ ಆಗಿಲ್ಲ ಎಂದು ಹೇಳಿದ್ರು. ಲೋಕಸಭಾ ಸದಸ್ಯನಾಗಿ ನನಗೆ ಬರುವ ಸಂಬಳವನ್ನು ನೀಡುತ್ತೇನೆಂದು ಹೇಳಿದ್ದೆ. ಅದರಂತೆ ಸಂಬಳದ ಮೊದಲ ಬಾಪ್ತು ನೀಡಿದ್ದೇನೆ. 19.94 ಲಕ್ಷ ರೂ.ಗಳನ್ನು ಇಂದು ಕೊಟ್ಟಿದ್ದೇನೆ. ರಾಜ್ಯ ಸರ್ಕಾರಕ್ಕೂ ಈ ಶಾಲೆಯ ಉಳಿವಿನ ಬಗ್ಗೆ ಮನವಿ ಮಾಡುವುದಾಗಿ ಹೇಳಿದ್ರು.
ಪಿಯುಸಿವರೆಗೆ ಈ ಶಾಲೆ ಮುಂದುವರಿಯಲಿ ಎಂದು ಬಯಸುತ್ತೇನೆ. ನಾನು ಸಹ ಶಾಲೆ ಉಳಿವಿಗೆ ಕೈ ಜೋಡಿಸುತ್ತೇನೆ. ಚುಂಚನಗಿರಿ ಶ್ರೀಗಳ ಜೊತೆಯೂ ಈ ಬಗ್ಗೆ ಮಾತಾಡಿದ್ದೇನೆ. ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಲ್ಲ.
ಹಂತ ಹಂತವಾಗಿ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆ ನಂಬರ್ ಓನ್ ಆಗಿರಬೇಕು. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡಿರುವ ಶಿಕ್ಷಕರಿಗೆ ಅಭಿನಂದನೆ ಎಂದು ಹೆಚ್‌ಡಿಕೆ ಹೇಳಿದ್ರು.
ಒಟ್ನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಹೆಚ್‌ಡಿಕೆ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.




