ಥರ್ಡ್ ಪಾರ್ಟಿ ಸೃಷ್ಟಿಯಾಗಿದ್ದು ನಿಮ್ಮದೇ ಕಾಂಗ್ರೆಸ್ ಪಕ್ಷದ ಜ್ಞಾತಿ ವರ್ಗದಲ್ಲಿ: ಸಿಎಂಗೆ ಸುನೀಲ್ ಕುಮಾರ್ ಟಾಂಗ್

Political News: ಜಾತಿ ಗಣತಿಗೆ ಬಿಜೆಪಿಗರು ವಿರೋಧಿಸುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸುನೀಲ್ ಕುಮಾರ್, ಜಾತಿ ಗಣತಿಗೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿಯೇ ಇಲ್ಲ. ಬದಲಾಗಿ ನಿಮ್ಮ ಪಕ್ಷದವರೇ ವಿರೋಧಿಸಿದ್ದಾರೆಂದು ಹೇಳಿದ್ದಾರೆ.

ಬಿಜೆಪಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧ ಮಾಡಿಯೇ ಇಲ್ಲ. ಗಣತಿಗೆ ವಿರೋಧ ವ್ಯಕ್ತವಾಗಿದ್ದೇ ಸಿದ್ದರಾಮಯ್ಯನವರ ಸಂಪುಟದಲ್ಲಿ. ಆದರೆ ಇದನ್ನು ಮುಚ್ಚಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯನವರು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದಾರೆ.

ಸಂಪುಟ ಸದಸ್ಯರು ಗಣತಿಗೆ ವಿರೋಧಿಸಿದರೆಂಬ ಕಾರಣಕ್ಕೆ ನೀವು ಸಭೆಯಲ್ಲೇ ಖಿನ್ನರಾಗಿದ್ದು, ಗದ್ಗದಿತರಾಗಿದ್ದು ಸುಳ್ಳೇ ?ನನ್ನನ್ನು ಜಾತಿವಾದಿ ಎಂದು ಬಿಂಬಿಸುತ್ತಿದ್ದರು ನೀವೆಲ್ಲ ಸುಮ್ಮನೆ ಇದ್ದಿದ್ದೇಕೆ ?ಎಂದು ಸಂಪುಟ ಸದಸ್ಯರ ಬಳಿ ಆರ್ತವಾಗಿ ಪ್ರಶ್ನಿಸಿದ್ದು ಸುಳ್ಳೇ? ಸಂಪುಟ ಸಭೆ ಮುಗಿದ ತಕ್ಷಣ ಹಿರಿಯ ಸಚಿವರು ತುರ್ತು ಸಭೆ ನಡೆಸಿದ್ದು, ನೀವು ತಡ ರಾತ್ರಿ ಸಂಪುಟ ಸದಸ್ಯರ ಜತೆಗೆ ಸಭೆ ನಡೆಸಿದ್ದು ಸುಳ್ಳೇ ? ಮರು ದಿನ ಬೆಳಗ್ಗೆ ಮತ್ತೆ ಹಿರಿಯ ಸಚಿವರ ಸಭೆ ನಡೆಸಿ ಸಮೀಕ್ಷೆಯ ದಿನ ಬದಲಾಯಿಸಲಾರೆ ಸಹಕರಿಸಿ ಎಂದು ಭಿನ್ನವಿಸಿದ್ದು ಸುಳ್ಳೇ ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ಜಾತಿ ಗಣತಿಗೆ ಈ ಬಾರಿಯೂ ವಿರೋಧ ಬಂದಿದ್ದು ನಿಮ್ಮ ಮಗ್ಗುಲಲ್ಲಿ, ಗಣತಿ ಮುಂದೂಡಿ ಎಂಬ ಕೂಗೆದ್ದಿದ್ದು ನಿಮ್ಮ ಕಣ್ಣಳತೆಯಲ್ಲಿರುವ ಸಂಪುಟದಲ್ಲಿ. ನ್ಯಾಯಾಲಯದ ಮೆಟ್ಟಿಲೇರುವಂತೆ ಥರ್ಡ್ ಪಾರ್ಟಿ ಸೃಷ್ಟಿಯಾಗಿದ್ದು ನಿಮ್ಮದೇ ಕಾಂಗ್ರೆಸ್ ಪಕ್ಷದ ಜ್ಞಾತಿ ವರ್ಗದಲ್ಲಿ!

ಜಾತಿ ಗಣತಿಗೆ ನಿಮ್ಮ ಬಗಲಲ್ಲಿ ವಿರೋಧದ ಧ್ವನಿಗಳನ್ನಿಟ್ಟುಕೊಂಡು ಈಗ ಬಿಜೆಪಿಯತ್ತ ಮುಖ ಮಾಡಿ ” ವಾದ” ಮಾಡಿದರೆ ಹೇಗೆ ? ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಕ್ಕಿಂತ ಸಿದ್ದರಾಮಯ್ಯ ಸಾತ್ ಸಿದ್ದರಾಮಯ್ಯ ವಿಕಾಸ್ ಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಅಧಿಕಾರವಧಿಯ ವಾರಂಟಿ ವಿಸ್ತರಣೆಗಾಗಿ ಸಾಮಾಜಿಕ ಪ್ರಕ್ಷುಬ್ಧತೆ ಸೃಷ್ಟಿಸಬೇಡಿ ಸ್ವಾಮಿ ಎಂದು ಶಾಸಕ ಸುನೀಲ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

About The Author