Friday, July 4, 2025

Latest Posts

ಉಗ್ರರ ಮಟ್ಟಹಾಕಲು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ : ಭಾರತಕ್ಕೆ ಅಮೆರಿಕ ಅಭಯ..!

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ತೀವ್ರ ವಿಷಮವಾಗಿದ್ದು, ಪಾಕಿಗಳ ಮೇಲೆ ಪ್ರತೀಕಾರ ಭಾರತ ಸಿದ್ಧವಾಗಿದೆ. ಆದರೆ ಈ ನಡುವೆ ಉಭಯ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಲು ಅಮೆರಿಕ ಮುಂದಾಗಿದೆ.

ಕುರಿತು ಖುದ್ದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಭಯೋತ್ಪಾದಕತೆ ವಿರುದ್ಧದ ಭಾರತದ ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅಲ್ಲದೆ ಪಹಲ್ಗಾಮ್‌ನಲ್ಲಿ ನಡೆದ ಅನಿರೀಕ್ಷಿತ ದಾಳಿಯ ತನಿಖೆಯಲ್ಲಿ ಪಾಕಿಸ್ತಾನ ಹೆಚ್ಚಿನ ಸಹಕಾರ ನೀಡುವಂತೆ ರೂಬಿಯೊ ಬುದ್ಧಿವಾದ ಹೇಳಿದ್ದಾರೆ.

ಭಾರತದ ಹೋರಾಟಕ್ಕೆ ಕೈ ಜೋಡಿಸಿ..

ಇನ್ನೂ ಈ ಮಾರ್ಕೊ ರೂಬಿಯೊ ಅವರ ಸಮಾಲೋಚನೆಯ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್‌, ಕಾರ್ಯದರ್ಶಿ ರೂಬಿಯೊ ಅವರು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ತಿಳಿಸಿದ್ದಾರೆ. ಭಾರತದ ಪರ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ, ಭಾರತ ಭಯೋತ್ಪಾದನೆಯ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಅಮೆರಿಕ ಯಾವಾಗಲೂ ಬೆಂಬಲ ನೀಡಲಿದೆ ಎಂದು ಅಮೆರಿಕದ ಬದ್ಧತೆಯನ್ನು ತಿಳಿಸಿದ್ದಾರೆ. ಪ್ರಮುಖವಾಗಿ ಈ ದಾಳಿಯನ್ನು ಪಾಕಿಸ್ತಾನವು ಪ್ರೋತ್ಸಾಗಿಸುತ್ತಿದೆ ಎಂದು ಭಾರತ ಆರೋಪ ಮಾಡುತ್ತಿದೆ, ಅಲ್ಲದೆ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವುದರಿಂದ ಎಚ್ಚರಿಕೆಯ ನಡೆಯನ್ನು ಅನುಸರಿಸುವಂತೆಯೂ ಅವರು ಕಿವಿಮಾತು ಹೇಳಿದ್ದಾರೆ ಎಂದು ಬ್ರೂಸ್‌ ತಿಳಿಸಿದ್ದಾರೆ.

ಭಯೋತ್ಪಾದಕರನ್ನು ನ್ಯಾಯದ ಕಟ ಕಟೆಗೆ ತರುತ್ತೇವೆ..

ರೂಬಿಯೊ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಚಿವ ಜೈಶಂಕರ್‌, ದಕ್ಷಿಣ ಏಷ್ಯಾದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ರೂಬಿಯೊ ಅವರು ಭಾರತವನ್ನು ಪ್ರೋತ್ಸಾಹಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳು, ಅವರ ಬೆಂಬಲಿಗರು ಮತ್ತು ದಾಳಿಯ ಯೋಜಕರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಬೇಕಿದೆ ಎಂದು ಬರೆದುಕೊಂಡಿದ್ದಾರೆ.

ದಾಳಿಯ ತನಿಖೆಗೆ ಪಾಕ್‌ ಸಹಕರಿಸಲಿ..

ಅಲ್ಲದೆ ಜೈಶಂಕರ್‌ ಬಳಿಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಪ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ರೂಬಿಯೊ, ಪಹಲ್ಗಾಮ್‌ನಲ್ಲಿ ನಡೆದ ಈ ಅವಿವೇಕ ದಾಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಪಾಕಿಸ್ತಾನದ ಅಧಿಕಾರಿಗಳ ಸಹಕಾರ ಇರಬೇಕೆಂದು ಕೇಳಿದ್ದಾರೆ. ಪ್ರಮುಖವಾಗಿ ಏಷ್ಯಾದ ದಕ್ಷಿಣ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ತಿಳಿಗೊಳಿಸಿ, ನೇರ ಮಾತುಕತೆಯ ವಾತಾವರಣವನ್ನು ಮತ್ತೊಮ್ಮೆ ಸೃಷ್ಟಿಸಲು ಹಾಗೂ ಭದ್ರತೆಯ ಜೊತೆಗೆ ಶಾಂತಿ ನೆಲೆಸಲು ಭಾರತ ನಡೆಸುತ್ತಿರುವ ಕೆಲಸದಲ್ಲಿ ಭಾಗಿಯಾಗುವಂತೆ ರೂಬಿಯೊ ಅವರು ಪಾಕ್‌ ಪ್ರಧಾನಿಗೆ ಸೂಚಿಸಿದ್ದಾರೆ ಎಂದು ಬ್ರೂಸ್‌ ತಿಳಿಸಿದ್ದಾರೆ. ಪ್ರಮುಖವಾಗಿ ಭಯೋತ್ಪಾದಕರ ಘೋರ ಹಿಂಸಾಚಾರಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ತಮ್ಮ ನಿರಂತರ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಟ್ಯಾಮಿ ಬ್ರೂಸ್‌ ವಿವರಿಸಿದ್ದಾರೆ.

ಮುಖ್ಯವಾಗಿ ಪಹಲ್ಗಾಮ್‌ ದಾಳಿಯನ್ನು ವಿರೋಧಿಸಿ ಜಾಗತಿಕ ಮಟ್ಟದ ನಾಯಕರು ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆಯು ಕೂಡ ಭೀಕರ ಘಟನೆಯನ್ನು ಅತ್ಯಂತ ಕಟುವಾಗಿ ಖಂಡಿಸಿದೆ. ಇಸ್ರೇಲ್‌ನಂತಹ ಬಲಿಷ್ಠ ರಾಷ್ಟ್ರಗಳು ಭಾರತಕ್ಕೆ ಯಾವುದೇ ರೀತಿಯ ನೆರವಿಗೆ ಸಿದ್ಧ ಎಂದು ಹೇಳಿವೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಸಹ ತನ್ನದೇ ಭಂಡತನ ತೋರುತ್ತಿರುವ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಚೀನಾ ದೇಶ ಹಾಗೂ ಬಾಂಗ್ಲಾ ಉಗ್ರರ ಮೊರೆ ಹೋಗಿ ಭಾರತದ ವಿರುದ್ಧ ಇನ್ನೊಂದು ದಾಳಿಯ ಯೋಜನೆ ರೂಪಿಸಲು ಮುಂದಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

- Advertisement -

Latest Posts

Don't Miss