Political news: ಮಧ್ಯಪ್ರಾಚ್ಯ ಯುದ್ಧದಿಂದ ಕಂಗಾಲಾಗಿದ್ದ ಭಾರತೀಯರಿಗೆ ಪ್ರಧಾನಿ ಮೋದಿ ಇಂದು ಗುಡ್ ನ್ಯೂಸ್ ನೀಡಿದ್ದಾರೆ. ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಯುದ್ಧದ ಪರಿಣಾಮವಾಗಿ ತೈಲಗಳ ಬೆಲೆ ಏರುತ್ತಲೇ ಇದೆ. ಅದೇ ರೀತಿ ನಮಗೂ ಬೆಲೆ ಏರಿಕೆ ಬಿಸಿ ಕಾದಿದೆ ಅಂತ ತಿಳಿದಿದ್ದ ಭಾರತೀಯರಿಗೆ ಪ್ರಧಾನಿ ಮೋದಿ, ರಾಮನವಮಿಗೆ ಗಿಫ್ಟ್ ನೀಡಿದ್ದಾರೆ.
ಅದೇನೆಂದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕದ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ನಿರ್ಧಾರದ ಬಗ್ಗೆ ಬಿಜೆಪಿ ನಾಯಕರೆಲ್ಲ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಶ್ವದಾದ್ಯಂತ ಇಂದು ಯುದ್ಧದ ಭೀತಿ ಮತ್ತು ಅನಿಶ್ಚಿತತೆ ಮನೆಮಾಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಕೇವಲ ಒಂದು ತಿಂಗಳಲ್ಲೇ ಬ್ಯಾರೆಲ್‌ಗೆ $70 ರಿಂದ $122 ರವರೆಗೆ ಏರಿಕೆಯಾಗಿದೆ. ಇದರಿಂದಾಗಿ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇ. 30 ರಿಂದ 50 ರಷ್ಟು ಹೆಚ್ಚಾಗಿವೆ. ಜಗತ್ತಿನ ಶ್ರೀಮಂತ ರಾಷ್ಟ್ರಗಳೇ ಈ ಬೆಲೆ ಏರಿಕೆಯಿಂದ ತತ್ತರಿಸುತ್ತಿವೆ.
ಆದರೆ, ಭಾರತದ ಜನಸಾಮಾನ್ಯರ ಮೇಲೆ ಈ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಒಂದು ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹13 ರಿಂದ ₹3 ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲದೆ, ಡೀಸೆಲ್ ಮೇಲಿನ ಸುಂಕವನ್ನು ಪೂರ್ಣವಾಗಿ (NIL) ರದ್ದುಗೊಳಿಸಲಾಗಿದೆ. ಜಾಗತಿಕವಾಗಿ ಬೆಲೆಗಳು ಏರುತ್ತಿದ್ದರೂ, ಭಾರತದಲ್ಲಿ ಮಾತ್ರ ಸುಂಕ ಕಡಿತಗೊಳಿಸಿ ಜನರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ನೀಡಲಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಈ ನಿರ್ಧಾರದಿಂದ ನಮ್ಮ ಸಾಮಾನ್ಯ, ಅದರಲ್ಲೂ ಮುಖ್ಯವಾಗಿ ವಾಹನ ಸವಾರರಿಗೆ ಮತ್ತು ರೈತರಿಗೆ ನೇರ ಲಾಭವಾಗಲಿದೆ. ಡೀಸೆಲ್ ಸುಂಕ ಶೂನ್ಯಕ್ಕಿಳಿಸಿರುವುದರಿಂದ ಸರಕು ಸಾಗಣೆ ವೆಚ್ಚ ನಿಯಂತ್ರಣದಲ್ಲಿರುತ್ತದೆ. ಇದರಿಂದ ದಿನಸಿ, ತರಕಾರಿ ಸೇರಿದಂತೆ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಯಾಗದಂತೆ ತಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯ ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡುವುದು ಮೋದಿಯವರ ಸರ್ಕಾರದ ಈ “ಜನಪರ” ನಡೆಯ ಉದ್ದೇಶವಾಗಿದೆ.
ಇದಲ್ಲದೆ, ನಮ್ಮ ದೇಶದ ತೈಲ ಸಂಪತ್ತು ಮೊದಲು ನಮ್ಮವರಿಗೇ ಸಿಗಬೇಕೆಂಬ ದೂರದೃಷ್ಟಿಯಿಂದ ಡೀಸೆಲ್ ಮತ್ತು ವಿಮಾನ ಇಂಧನ ರಫ್ತಿನ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ. ಇದರಿಂದ ದೇಶದೊಳಗೆ ಇಂಧನದ ಕೊರತೆ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಷ್ಟೇ ಏರಿಳಿತಗಳಿದ್ದರೂ, ಭಾರತದ ಆರ್ಥಿಕತೆಯನ್ನು ಮತ್ತು ನಾಗರಿಕರ ಹಿತವನ್ನು ಕಾಪಾಡಲು ಸದಾ ಬದ್ಧವಾಗಿರುವ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದು ಆರ್.ಅಶೋಕ್ ಹೇಳಿದ್ದಾರೆ.




