ತಪ್ಪದೇ ನಮ್ಮ ನಾಟಕ ನೋಡಾಕ ಬರ್ರಿ ಎಂದು ಕರೆದಿದ್ದ ರಂಗಭೂಮಿ ಕಲಾವಿದ ಯಶವಂತ್ ಸರ್‌ದೇಶಪಾಂಡೆ

Sandalwood: ನಟ, ರಂಗಭೂಮಿ ಕಲಾವಿದ ಯಶವಂತ್ ಸರ್ದೇಶಪಾಂಡೆ(61) ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದ“ಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಯಶ್ವಂತ್ ನಿಧನರಾಗಿದ್ದಾರೆ.

ಯಶ್ವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದವರು. ಅವರೇ ಸ್ವತಃ ರಚಿಸಿದ ಕೆಲ ಹಾಸ್ಯ ತುಣುಕುಗಳು, ಬರಹಗಳು, ತಮ್ಮ ನಾಟಕಗಳ ಬಗ್ಗೆ ಬರೆಯುತ್ತಿದ್ದರು. ಅದೇ ರೀತಿ ನಿನ್ನೆ ತಾನೇ ಯಶವಂತ್ ಇದೇ ಅಕ್ಟೋಬರ್ 18ಕ್ಕೆ ನಾಟಕವಿದೆ ನೋಡಲು ಬನ್ನಿ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಬರೆದಿದ್ದರು. ಆದರೆ ವಿಪರ್ಯಾಸವೆಂದರೆ ಇಂದು ಅವರೇ ಇಲ್ಲ.

ಅವರ ಬರಹ ಇಂತಿತ್ತು..

ಖ್ಯಾತ ಕೊಳಲು ಕಲಾವಿದ ಸೂರಮಣಿ ಪಂಡಿತ ಡಾ ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು.com(edy)’ ಎಂಬ ಹೊಸ ನಾಟಕದ ಪ್ರದರ್ಶನ… ನಿರ್ದೇಶನ ಅವರದs, ಮತ್ತ ರಂಗದ ಮ್ಯಾಲೆ ಪ್ರಮುಖ ಪಾತ್ರದಾಗ ಕಾಣಿಸಿಗೋತಾರ… ಕಲೆಯ ಬಗ್ಗೆ ಅಪಾರ ಕಾಳಜಿ ಇಟಗೊಂಡಿರೋ, ಏನ್ ಮಾಡಿದರೂ ಭಾಳ ಶಿಸ್ತಿನಿಂದ ನಿರ್ವಹಿಸುವ ಮತ್ತ ಕ್ರಿಯಾಶೀಲರಾಗಿ ಪ್ರಸ್ತುತಿ ಮಾಡುವ ಡಾ ಪ್ರವೀಣ್ ಗೊಡಖಿ೦ಡಿಯವರ ಜೋಡಿ ರಂಗದ ಮ್ಯಾಲೆ ನಾನೂ ಅಭಿನಯ ಮಾಡತೇನಿ… ನಿವ್ವಳ ನಗು ಮತ್ತ ಸಂಗೀತದ ಹೊಳಹನ್ನು ರಂಗದ ಮ್ಯಾಲೆ ಸಾಕಾರ ಆಗತಿರೋ ಈ ರಂಗಪ್ರಯೋಗ ನಿಮಗೆಲ್ಲ ಆನಂದದ ಔತಣ ನೀಡತದ, ಸಂಶಯ ಇಲ್ಲ !! ಪ್ರದರ್ಶನ ದಿನಾಂಕ : 18/10/2025, ಶನಿವಾರ ಸಂಜಿ 6:30, ಬೆಂಗಳೂರಿನ ಏನ್ ಅರ ಕಾಲೋನಿ ಸ್ಥಿತ ಡಾ ಸಿ ಅಶ್ವಥ್ ಕಲಾಮಂದಿರದಾಗ !! ಪ್ರವೇಶ ಪಾತ್ರಗಳು ಬುಕ್ ಮೈ ಷೋ ದಾಗ ಲಭ್ಯ !! ಬರಬೇಕರೀ ಎಲ್ಲಾರೂ… ಎಂದು ಸರ್ದೇಶಪಾಂಡೆ 1 ದಿನದ ಹಿಂದೆಯಷ್ಟೇ ಬರೆದಿದ್ದರು.
ಯಶ್ವಂತ್ ಸರ್ದೇಶ್ಪಾಂಡೆ ರಾಮ ಶಾಮ ಭಾಮ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದ ಕೆಲ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಇವರ ಪತ್ನಿ ಮಾಲತಿ ಕೂಡ ನಟಿಯಾಗಿದ್ದು, ಸತ್ಯ ಸಿರಿಯಲ್ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಯಶ್ವಂತ್ ಪತ್ನಿ ಮಾಲತಿ ಮತ್ತು ಪುತ್ರಿ ದೋಸ್ತಿಯನ್ನು ಅಗಲಿದ್ದಾರೆ. ಇನ್ನು ಯಶ್ವಂತ್ ನಿಧನಕ್ಕೆ ಕಲಾವಿದರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

About The Author