Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮೂರು ಚುನಾವಣೆಗಳಲ್ಲಿಕಾಂಗ್ರೆಸ್ ಪರ ಅಲೆ ಇದೆ. ಮೂರು ಕ್ಷೇತ್ರಗಳಲ್ಲಿ ಬಾರೀ ಬಹುಮತದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿಗ್ಗಾವಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಬೊಮ್ಮಾಯಿ ಸಿಎಂ ಆದ ಸಂದರ್ಭವೂ ಯಾವುದೇ ಅಭಿವೃದ್ದಿ ಕೆಲಸಗಳಾಗಿಲ್ಲ.
ಒಂದು ಕ್ರೀಡಾಂಗಣ ಸರಿಯಾಗಿ ನಿರ್ಮಿಸಲು ಆಗಿಲ್ಲ ಯುವಕರ ಮತ ಕೇಳ್ತಾರೆ. ಯಾವುದೇ ಅಭಿವೃದ್ದಿ ಮಾಡದೇ ರೈತರ ಮತ ಕೇಳ್ತಾರೆ. ಹಾಗಾಗಿ ಯಾವುದೇ ಭ್ರಷ್ಟಾಚಾರ ಮಾಡದೇ ನಾವು ಜನತೆಗೆ ಅಭಿವೃದ್ದಿ ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಶಿಗ್ಗಾವಿ ಜನತೆಗೆ ಪ್ರಗತಿಬೇಕು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾರೆ. ಬಿಜೆಪಿಯವರ ಮಾತಿಗೆ ಯಾರೂ ಮರುಳಾಗಲ್ಲ. ಶಿಗ್ಗಾವಿ ಜನ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವುದು ನಿಶ್ಚಿತ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.
ಬಿಜೆಪಿಯವರು ರೈತರ ಆದಾಯ ದುಪ್ಪಟ್ಟು ಮಾಡ್ತೇವೆ ಅಂದ್ರು, ಗ್ಯಾಸ್ ಸಿಲೆಂಡರ್ ಸಬ್ಸಿಡಿ ಹೇಳಿ ಮತ ಪಡೆದ್ರು. ಕಾಂಗ್ರೆಸ್ ಪಕ್ಷ ಮಧ್ಯವರ್ತಿ ಇಲ್ಲದೇ ಪಂಚ ಗ್ಯಾರೆಂಟಿ ಕೊಟ್ಟಿದೆ. ಗ್ಯಾರೆಂಟಿ ಜೊತೆ ಅಭಿವೃದ್ಧಿ ಕೆಲಸ ಮಾಡ್ತಾ ಇದ್ದೇವೆ. ಶಿಗ್ಗಾವಿಯಲ್ಲಿ ನಮ್ಮ ಅಭ್ಯರ್ಥಿ ಯಾಸಿರಖಾನ್ ಪಠಾನ್ 25 ಸಾವಿರಕ್ಕೂ ಅಧಿಕ ಅಂತರದಿಂದ ಗೆಲ್ತಾರೆ. ಅವರ ದೌರ್ಬಲ್ಯ ಮುಚ್ಚಿಟ್ಟುಕೊಳ್ಳಲು ಹಲವು ದಾರಿ ಹಿಡೀತಾರೆ ಎಂದು ಹೇಳಿದ್ದಾರೆ.
ಶಿಷ್ಯ ವೇತನ ಬಂದ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಖಂಡ್ರೆ, ಹಿಂದುಳಿದ ವರ್ಗದ ಮಕ್ಕಳಿಗೆ ಶಿಷ್ಯ ವೇತನ ಬಂದ್ ಮಾಡಿದ್ದು ಬಿಜೆಪಿ. ಅವರ ಆಡಳಿತದಲ್ಲಿ ಕೇಂದ್ರದಿಂದ ಸುತ್ತೋಲೆ ಬಂತು ಅಂತ ರಾಜ್ಯದಲ್ಲಿ ಬಂದ್ ಮಾಡಿದ್ರು. ಸರ್ವಾಧಿಕಾರ ನೀತಿ ಬಿಜೆಪಿಯ ಕೇಂದ್ರ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಅವರ ಹಿಟ್ಲರ್ ಶಾಹಿ ಆಡಳಿತ ನಡೆಯುತ್ತಿದೆ ಎಂದು ಖಂಡ್ರೆ ಹೇಳಿದ್ದಾರೆ.