ದಾವಣಗೆರೆ : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ವಿಚಾರದ ಚರ್ಚೆ ನಡೆಯುತ್ತಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಆಪ್ತರು ಅವರನ್ನೇ ಮುಂದುವರೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಬಲಿಗರೂ ಕೂಡ ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.
ತಮ್ಮ ನೆಚ್ಚಿನ ನಾಯಕ ಸಿಎಂ ಆಗಲಿ ಎಂದು ದಾವಣಗೆರೆ ಶಕ್ತಿ ದೇವತೆ ದುಗ್ಗಮ್ಮ ದೇವಿಗೆ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಯಪ್ರಕಾಶ್ ನೇತೃತ್ವದಲ್ಲಿ ಪೂಜೆ ಸಲ್ಲಸುವ ಮೂಲಕ ಡಿಕೆಶಿ ಪರ ಘೋಷಣೆ ಕೂಗಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅಭಿಮಾನಿ ಜಯಪ್ರಕಾಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ರಕ್ತ ಬಸಿದು ಪಕ್ಷ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಾರೆ. 136 ಜನ ಶಾಸಕರನ್ನು ಗೆಲ್ಲಿಸುವಲ್ಲಿ ಅವರ ಶ್ರಮ ಅಧಿಕವಾಗಿದೆ. ಹೀಗಾಗಿ ಇದೇ ಅವಧಿಯಲ್ಲಿ ಅವರನ್ನು ಸಿಎಂ ಮಾಡಲೇಬೇಕು ಎಂದು 101 ತೆಂಗಿನಕಾಯಿ ಒಡೆಯಲಾಗಿದೆ. ಇದೇ ನವೆಂಬರ್ 21ರಿಂದ 28ರೊಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ” ಎಂದು ಭವಿಷ್ಯ ನುಡಿಯುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಮುಖ್ಯವಾಗಿ ದುಗ್ಗಮ್ಮ ದೇವಿಯ ಎದುರು ಡಿ.ಕೆ.ಶಿವಕುಮಾರ್ ಅವರ ಫೋಟೋ ಹಿಡಿದು ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಕೂಗಿದ್ದಾರೆ. ಸುರಿಯುತ್ತಿದ್ದ ಮಳೆಯ ನಡುವೆಯೇ ದೇವಸ್ಥಾನದೆದುರು 101 ತೆಂಗಿನಕಾಯಿ ಒಡೆದು ಅಭಿಮಾನಿಗಳು ತಮ್ಮ ಅಭಿಮಾನವನ್ನು ಹೊರಹಾಕಿದ್ದಾರೆ.
ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಎರಡೂ ಪ್ರಮುಖ ಹುದ್ದೆಗಳ ಬದಲಾವಣೆಯ ಕೂಗು ಹೆಚ್ಚಾಗುತ್ತಿದೆ. ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಹುದ್ದೆಯನ್ನು ಬೇರೊಬ್ಬರಿಗೆ ಬಿಟ್ಟುಕೊಡಬೇಕೆನ್ನುವ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಒಂದು ಬಣದ ಹೇಳಿಕೆಗಳು ಬಂದರೆ, ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಇನ್ನೊಂದು ಬಣದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೈ ನಾಯಕರು ಈ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಪಕ್ಷದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಅಭಿಮಾನಿಗಳು ಮಾತ್ರ ತಮ್ಮ ನಾಯಕನಿಗಾಗಿ ಇನ್ನಷ್ಟು ಉನ್ನತ ಹುದ್ದೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.