ಬೀದಿ ದನಗಳ ಹಾವಳಿಗೆ ಇಲ್ಲ ಮುಕ್ತಿ: ಗಣೇಶೋತ್ಸವ ಸಂಭ್ರಮದಲ್ಲೂ ಎಚ್ಚೆತ್ತುಕೊಳ್ಳದ ಪಾಲಿಕೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರ್ಧಾರಗಳು ಕೇವಲ ಪೇಪರ್ ಹಾಗೂ ಪ್ರಚಾರಕ್ಕೆ ಸೀಮಿತವಾದಂತಾಗಿದೆ. ವಾಣಿಜ್ಯನಗರಿ ಗಣೇಶೋತ್ಸವ ಸಂಭ್ರಮ ಅಂದರೇ ನಿಜಕ್ಕೂ ಅದೊಂದು ಭಕ್ತ ಸಮೂಹಕ್ಕೆ ಸಾಕ್ಷಿಯಾಗುವ ಹಬ್ಬ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟು ಮಾಡುವ ಬೀದಿ ದನಗಳ ಕಾರ್ಯಾಚರಣೆಗೆ ಮಾತ್ರ ಪಾಲಿಕೆ ಮುಂದಾಗಿಲ್ಲ.

ಬೀದಿ ದನಗಳ ಹಾವಳಿ ನಿಯಂತ್ರಣಕ್ಕೆ ಅದೆಷ್ಟೋ ಕ್ರಮಗಳನ್ನು ಕೈಗೊಂಡರೂ ಕೂಡ ಅವಳಿನಗರದ ಜನರಿಗೆ ಮಾತ್ರ ಬೀದಿ ದನಗಳಿಂದ ಮುಕ್ತಿ ಸಿಗುತ್ತಿಲ್ಲ. ಹೌದು.. ಹುಬ್ಬಳ್ಳಿಯ ಬಹುತೇಕ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಬೀದಿ ದನಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮೂರು, ಐದು, ಹನ್ನೊಂದನೇ ದಿನಗಳ ಗಣಪತಿ ವಿಸರ್ಜನೆ ಸಂಭ್ರಮ ಲಕ್ಷಾಂತರ ಭಕ್ತರ ಉಪಸ್ಥಿತಿಯನ್ನು ಹೊಂದಿರುತ್ತದೆ. ಹೀಗಿದ್ದರೂ ಬೀದಿ ದನಗಳ ಕಾರ್ಯಾಚರಣೆ ಮಾಡದೇ ಪಾಲಿಕೆ ನಿರ್ಲಕ್ಷ್ಯ ವಹಿಸುತ್ತಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಬೀದಿ ದನಗಳ ಹಾವಳಿ ನಿಯಂತ್ರಣಕ್ಕೆ ಕ್ಯಾಟಲ್ ಕ್ಯಾಚರ್ಸ್ ನಿಯೋಜನೆಗೆ ಅರ್ಜಿ ಕೂಡ ಕರೆದಿತ್ತು. ಆದರೆ ಈಗ ಯಾರು ಕೂಡ ಈ ಬಗ್ಗೆ ಆಸಕ್ತಿ ತೋರದೇ ಇರುವುದರಿಂದ ಬೀದಿ ದನಗಳ ಹಾವಳಿಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಎಲ್ಲೆಂದರಲ್ಲಿ ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುವ ಬೀದಿ ದನಗಳ ಸಮಸ್ಯೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಫಲವಾಗಿದೆ.

ಬೀದಿ ದನಗಳ ನಿರಂತರ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಸೆರೆಹಿಡಿಯುವಿಕೆಯನ್ನು ಎಲ್ಲಾ ವಲಯ ಸಹಾಯಕ ಆಯುಕ್ತರು (ZAC ಗಳು) ಮತ್ತು ಸಹಾಯಕ ಸಿಬ್ಬಂದಿಯವರಿಗೆ ವಹಿಸಲಾಗಿದ್ದು, ಇದುವರೆಗೂ ಅವಳಿನಗರದ ಜನರಿಗೆ ಬೀದಿ ದನಗಳ ಹಾವಳಿ ಮಾತ್ರ ತಗ್ಗಿಲ್ಲ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author