Political News: ನಿನ್ನೆ ಬಿಡದಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಗಲಾಟೆ ಬಗ್ಗೆ ಮತ್ತು ರೈತರ ಮೇಲೆ ಪೋಲೀಸರಿಂದ ನಡೆದ ದಾಳಿಯ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಅನ್ನದಾತರ ಆಕ್ರೋಶಕ್ಕೆ ಗುರಿಯಾದ ಯಾವ ಸರ್ಕಾರವೂ ಉಳಿದ ಇತಿಹಾಸವಿಲ್ಲ! ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳಲು ಹೊರಟಿರುವ ಈ ಭೂಗಳ್ಳರ ಸರ್ಕಾರಕ್ಕೆ ಬಿಡದಿಯ ಮಂಡಲಹಳ್ಳಿಯಲ್ಲಿ ಅನ್ನದಾತರು ತಕ್ಕ ಪಾಠ ಕಲಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ರೈತರ ಹೊಟ್ಟೆಗೆ ಹೊಡೆಯಲು ಹೊರಟಿರುವ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೇ, ಕಿವಿ ಕೇಳಿಸುತ್ತಿಲ್ಲವೇ? ಸ್ವತಃ ತಾಯಂದಿರೇ ರೊಚ್ಚಿಗೆದ್ದು, ಕಸಪೊರಕೆ ಹಿಡಿದು ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ ಎಂದರೆ ಈ ಸರ್ಕಾರದ ವಿರುದ್ಧ ಜನಸಾಮಾನ್ಯರಲ್ಲಿ ಎಷ್ಟರ ಮಟ್ಟಿಗೆ ಆಕ್ರೋಶ ಕುದಿಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ನೆನಪಿರಲಿ ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಅನ್ನದಾತರ ಕಣ್ಣೀರು ಮತ್ತು ಆಕ್ರೋಶಕ್ಕೆ ಗುರಿಯಾದ ಯಾವುದೇ ಸರ್ಕಾರ ಇತಿಹಾಸದಲ್ಲಿ ಉಳಿದಿಲ್ಲ, ನಿಮಗೂ ಅದೇ ಗತಿ ಕಾದಿದೆ! ತಕ್ಷಣವೇ ಬಿಡದಿ ಟೌನ್ಶಿಪ್ ಹೆಸರಿನ ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿ. ಇಲ್ಲವಾದರೆ ರೈತರ ಆಕ್ರೋಶದ ಜ್ವಾಲೆಯಲ್ಲಿ ನಿಮ್ಮ ಸರ್ಕಾರ ಸುಟ್ಟು ಭಸ್ಮವಾಗುವುದು ಗ್ಯಾರೆಂಟಿ, ಹುಷಾರ್! ಎಂದು ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.




