ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಈಗ ರೋಚಕ ಹಂತಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಸ್ಪರ್ಧಿಗಳ ಆಟ ಸ್ವಲ್ಪ ಬೋರ್ ಆಗಿತ್ತು ಎನ್ನಿಸಿದರೂ, ದಿನದಿಂದ ದಿನಕ್ಕೆ ಬಿಗ್ ಬಾಸ್ ನೀಡುತ್ತಿರುವ ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತಿವೆ. ಈ ಸೀಸನ್‌ನಲ್ಲಿ ಸಾಕಷ್ಟು ಅಚ್ಚರಿ ಘಟನೆಗಳು ಇರಲಿವೆ ಎಂದು ಬಿಗ್ ಬಾಸ್ ತಂಡ ಮೊದಲೇ ಸೂಚಿಸಿದ್ದರು. ಈ ವಾರಾಂತ್ಯದಲ್ಲಿ ನಡೆಯಲಿರುವ ಮೊದಲ ಫಿನಾಲೆಗೂ ಮುನ್ನ, ದೊಡ್ಮನೆಯಲ್ಲಿ ಭಾರಿ ಟ್ವಿಸ್ಟ್ ಸಿಕ್ಕಿದೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಒಬ್ಬರಲ್ಲ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬೀಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 18 ಮತ್ತು 19ರಂದು ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಫಿನಾಲೆ ನಡೆಯಲಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ಪ್ರಯೋಗ. ಸದ್ಯ ದೊಡ್ಮನೆಯಲ್ಲಿ 17 ಮಂದಿ ಸ್ಪರ್ಧಿಗಳು ಇದ್ದು, ಇವರಲ್ಲಿ ಇಬ್ಬರು ವಾರದ ಮಧ್ಯದಲ್ಲೇ ಔಟ್ ಆಗಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ವಾರಾಂತ್ಯದಲ್ಲಿ 4 ರಿಂದ 5 ಜನ ಸ್ಪರ್ಧಿಗಳು ಹೊರಹೋಗುವ ಸಾಧ್ಯತೆ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಈ ಬಾರಿ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಸತೀಶ್ ಮತ್ತು ಮಂಜು ಭಾಷಿಣಿ ಔಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಎಪಿಸೋಡ್ ಅಕ್ಟೋಬರ್ 16ರಂದು ಪ್ರಸಾರ ಕಾಣುವ ಸಾಧ್ಯತೆ ಇದೆ. ಈ ನಡುವೆ ಫಿನಾಲೆಗೆ ಕೆಲ ಸ್ಪರ್ಧಿಗಳು ಈಗಾಗಲೇ ಆಯ್ಕೆಯಾಗಿದ್ದಾರೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಮತ್ತು ರಾಶಿಕಾ ಫಿನಾಲೆ ಸ್ಥಾನ ಗಳಿಸಿದ್ದಾರೆ. ಉಳಿದವರು ಫಿನಾಲೆಗೆ ಸೇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ಮೊದಲ ಫಿನಾಲೆ ವಿಶೇಷ ಕಾರ್ಯಕ್ರಮ ಅಕ್ಟೋಬರ್ 18 ಮತ್ತು 19ರಂದು ರಾತ್ರಿ 8 ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿಯೂ ನಾಲ್ಕು-ಐದು ಎಲಿಮಿನೇಷನ್‌ಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಆದರೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೆಲವರು ಮರಳಿ ದೊಡ್ಮನೆಗೆ ಬರಬಹುದಾದ ಸೂಚನೆಗಳೂ ಇವೆ. ಇದರಲ್ಲಿ ಶ್ವೇತಾ ಪ್ರಸಾದ್ ಮೊದಲಾದವರ ಹೆಸರುಗಳು ಈಗ ಚರ್ಚೆಯಲ್ಲಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ