ಕೇವಲ 3 ಗಂಟೆ ಕಳೆದಿದ್ರೆ ದೇವರ ಸನ್ನಿಧಿ ತಲುಪುತ್ತಿದ್ರು. ಅಷ್ಟರಲ್ಲೇ ಯಮಧೂತನಂತೆ ಬಂದ ಬಸ್ ಹರಿದು, ಮೂವರು ಪಾದಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ, 40 ವರ್ಷದ ಅನ್ನಪೂರ್ಣ, 25 ವರ್ಷದ ಪ್ರಕಾಶ್, 19 ವರ್ಷದ ಶರಣಪ್ಪ ಬಲಿಯಾಗಿದ್ದಾರೆ. ಮೃತರೆಲ್ಲರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರು.

ಕಳೆದ 2 ದಿನಗಳ ಹಿಂದೆ ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ರು. ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್, ಪಾದಯಾತ್ರಿಗಳ ಮೇಲೆ ಹರಿದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಲಿಕಾರ್ಜುನ ಮ್ಯಾಗೇರಿ, ಆದಪ್ಪ ಅಂಡಿ, ಸಿದ್ದಪ್ಪ ಅಂಡಿ, ಕಸ್ತೂರಿಯವ್ವ ಮ್ಯಾಗೇರಿ ಅವರನ್ನು, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ಅಪಘಾತ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ ಚಾಲಕ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.


