Thursday, October 23, 2025

Latest Posts

ಹಾಸನಾಂಬೆಯ ಬಾಗಿಲು ಬಂದ್ :ಇತಿಹಾಸ ನಿರ್ಮಿಸಿದ ಈ ಬಾರಿ ಜಾತ್ರೆ!

- Advertisement -

ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿ ಈ ವರ್ಷವೂ ಭಕ್ತರಿಗೆ ಕರುಣೆಯ ದರ್ಶನ ನೀಡಿದ ನಂತರ, ದೇವಾಲಯದ ಗರ್ಭಗುಡಿ ಬಾಗಿಲು ಅಕ್ಟೋಬರ್ 23 ಅಂದರೆ ಇಂದು ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತ ರೀತಿಯಲ್ಲಿ ಮುಚ್ಚಲಾಗಿದೆ.

ಅಕ್ಟೋಬರ್ 9ರಿಂದ ಆರಂಭವಾದ 13 ದಿನಗಳ ದರ್ಶನಾವಧಿಯಲ್ಲಿ, ದಾಖಲೆ ಮಟ್ಟದ 26 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಎಸ್ಪಿ ಮಹಮ್ಮದ್ ಸುಜಿತಾ, ಎಸಿ ಮಾರುತಿ ಅವರ ಸಮ್ಮುಖದಲ್ಲಿ ಬಾಗಿಲು ಮುಚ್ಚುವ ಶಾಸ್ತ್ರ ನೆರವೇರಿಸಲಾಯಿತು. ಅರ್ಚಕರು ದೀಪ ಹಚ್ಚಿ, ಹೂವು ಹಾಗೂ ನೈವೇದ್ಯ ಸಮರ್ಪಿಸಿದ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಲಾಯಿತು.

ಈ ಬಾರಿ ದೇವಿಯ ದರ್ಶನ ಮತ್ತು ಜಾತ್ರಾ ಮಹೋತ್ಸವದಿಂದ ಲಾಡು ಪ್ರಸಾದ, ಟಿಕೆಟ್ ಹಾಗೂ ಸೀರೆ ಮಾರಾಟದ ಮೂಲಕ ಸುಮಾರು 23 ಕೋಟಿ ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನಸಂದಣಿ ಇದ್ದರೂ, ಸಚಿವ ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ಉತ್ತಮ ವ್ಯವಸ್ಥೆ ನಡೆದಿರುವುದಕ್ಕೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಗಿದೆ.

ಗರ್ಭಗುಡಿ ಬಾಗಿಲು ಮುಚ್ಚುವ ಮೊದಲು ಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಕೆಂಡೋತ್ಸವ ಅದ್ಧೂರಿಯಾಗಿ ನೆರವೇರಿತು. ರಾತ್ರಿಯಿಡೀ ಸುರಿದ ಮಳೆಯಿಂದ ಕೆಲ ತಡವಾದರೂ, ಸಾವಿರಾರು ಭಕ್ತರು ಕೆಂಡ ಹಾಯಲು ತಾಳ್ಮೆಯಿಂದ ಕಾದರು. ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸಹ ಕೆಂಡ ಹಾಯ್ದು ಭಕ್ತಿ ಮೆರೆದರು. ಬಳಿಕ ಅವರು, ಮೊದಲು ಭಯವಾಗಿತ್ತು, ಆದರೆ ಭಕ್ತಿಯಿಂದ ಕೈ ಮುಗಿದು ಹೋದಾಗ ಏನೂ ಆಗಲಿಲ್ಲ, ಇದು ದೇವಿಯ ಕೃಪೆ ಎಂದು ಭಾವೋದ್ರಿಕ್ತವಾಗಿ ತಮ್ಮ ಅನುಭವ ಹಂಚಿಕೊಂಡರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss