ದಾವಣಗೆರೆನಲ್ಲಿ ಬಿಗಡಾಯಿಸಿದ ಟಿಕೆಟ್ ಫೈಟ್!

ರಾಜ್ಯದ ಉಪಚುನಾವಣೆಯ ರಣರಂಗ ತೀವ್ರಗೊಳ್ಳುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿಯದೆ ಗೊಂದಲ ಮುಂದುವರಿದಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಕಾಂಗ್ರೆಸ್‌ನಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಬಾಗಲಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ HY ಮೇಟಿ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದ್ದರೂ, ಅವರ ನಾಲ್ವರು ಮಕ್ಕಳ ಪೈಕಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ತಲೆದೋರಿದೆ. ಸಿಎಂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದರೂ, ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆ ಮಾಡುವ ಎಚ್ಚರಿಕೆ ಕೂಡ ಕೇಳಿಬರುತ್ತಿದೆ.

ಮಲ್ಲಿಕಾರ್ಜುನ ಮೇಟಿ ಹಾಗೂ ಉಮೇಶ್ ಮೇಟಿ ನಡುವೆ ಟಿಕೆಟ್ ಪೈಪೋಟಿ ಹೆಚ್ಚಾಗಿದ್ದು, ಉಮೇಶ್ ಮೇಟಿ ಅವರಿಗೆ ಹೆಚ್ಚು ಅವಕಾಶ ಇದೆ ಎನ್ನಲಾಗುತ್ತಿದೆ. ಆದರೆ, ಕಿರಿಯ ಪುತ್ರಿ ಮಹಾದೇವಿ ಮೇಟಿ ಬಂಡಾಯದ ಸುಳಿವು ನೀಡಿರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಪಕ್ಷದ ಒಳಗೇ ಭಾರಿ ಪೈಪೋಟಿ ನಡೆಯುತ್ತಿದೆ. ಸಚಿವ SS ಮಲ್ಲಿಕಾರ್ಜುನ್ ತಮ್ಮ ಪುತ್ರ ಸಮರ್ಥ್‌ಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಪಕ್ಷದ ಕೆಲವು ನಾಯಕರು ಒತ್ತಾಯಿಸುತ್ತಿದ್ದಾರೆ.

ಉಸ್ತುವಾರಿ ಸಮಿತಿ ಸಭೆಯಲ್ಲೂ ಹಲವು ಹೆಸರುಗಳು ಚರ್ಚೆಗೆ ಬಂದಿದ್ದು, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ಪರ ಬಲವಾದ ಒತ್ತಡ ಕಾಣಿಸಿಕೊಂಡಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿದ್ದು, ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

About The Author