Tipaturu: ತಿಪಟೂರು: ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು,ಉತ್ತಮ ಗುಣಮಟ್ಟದ ಶಿಕ್ಷಣದಿಂದ ಯಾರು ವಂಚಿತರಾಗಬಾರದೆಂದು ರೋಟರಿ ಸಂಸ್ಥೆ ಅಧ್ಯಕ್ಷೆ ವನಿತ ಪ್ರಸನ್ನ ಕುಮಾರ್ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ನೋಟ್ ಬುಕ್ ಮತ್ತು ಲೇಖನಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವನಿತಾ, ಸರ್ಕಾರಿ ಶಾಲೆಯಲ್ಲಿ ಹಿಂದುಳಿದ ಮತ್ತು ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಶಿಕ್ಷಣ ದೊರೆಯಲೆಂದು ಮತ್ತು ಶಾಲೆಗೆ ಹೋಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್ ಪ್ರತಿವರ್ಷ ಹಿಂದುಳಿದ ಗ್ರಾಮಗಳ ಶಾಲೆಗಳನ್ನು ಆಯ್ಕೆ ಮಾಡಿಕೊಂಡು,ನೋಟ್ಬುಕ್ ವಿತರಿಸುವ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದು ಅವರ ಸೇವೆಗೆ ಸಾಕ್ಷಿಯಾಗಿದೆ. ನಾವುಗಳು ನಮ್ಮ ರೋಟರಿಯಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಮತ್ತು ಈ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ತಿಳಿಸಿದರು.
ಆಯೋಜಕ ಮತ್ತು ಸಂಘಟನೆ ಅಧ್ಯಕ್ಷ ಬಿ.ಟಿ.ಕುಮಾರ್ ಮಾತನಾಡಿ, ಈ ಶಾಲೆಯು ಮುಂದಿನ ವರ್ಷಕ್ಕೆ ನೂರು ವರ್ಷ ಪೂರೈಸುತ್ತಿದ್ದು, ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ಶತಮಾನೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಮಾಡಲು ಇಚ್ಚಿಸಿದ್ದೇವೆ. ತಮಗೆ ವಿದ್ಯಾಭ್ಯಾಸ ಕೊಟ್ಟಂತಹ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಲಾದಷ್ಟು ಕೈಜೋಡಿಸಿದ್ದೇನೆ. ನಾವು ವಿದ್ಯಾಭ್ಯಾಸ ಮಾಡಿದಂತಹ ಶಾಲೆ ಹಾಗೂ ನಮಗೆ ಆಶ್ರಯ ಕೊಟ್ಟ ಗ್ರಾಮವನ್ನು ಯಾವತ್ತಿಗೂ ಮರೆಯಬಾರದು.ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡೋ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಯುವ ಮುಖಂಡ ತಿಲಕ್ ಕುಮಾರ್ ಮಾತನಾಡಿ, ಮಕ್ಕಳ ಆರೋಗ್ಯ, ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಇಂತಹ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷಕರ. ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಮತ್ತು ಜ್ಞಾನದ ವಿಸ್ತರಣೆಯೊಂದಿಗೆ ಪ್ರತಿಯೊಬ್ಬರೂ ಚೆನ್ನಾಗಿ ಓದಿ, ಹುಟ್ಟಿದ ಊರು, ಶಾಲೆ ಹಾಗೂ ನಾಡಿಗೆ ಕೀರ್ತಿ ತರುವಂತಾಗಬೇಕು. ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಸೀಮಿತವಾಗದೆ, ಇಂತಹ ಸಾಮಾಜಿಕ ಕಾರ್ಯಕ್ರಮಕ್ಕೆ ಮುಂದಾದಾಗ ಸಂಘಟನೆಯ ಮೇಲೆ ಸಾರ್ವಜನಿಕರಿಗೆ ಒಳ್ಳೆ ಅಭಿಪ್ರಾಯ ಮೂಡಿ, ಪ್ರಶಂಸೆಗೆ ಕಾರಣವಾಗುತ್ತಾರೆ ಎಂದು ತಿಳಿಸಿದರು.
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಬಿ.ಬಿ. ಬಸವರಾಜು,ನಗರಸಭಾ ಸದಸ್ಯ ಲೋಕನಾಥ್ ಸಿಂಗ್,ರೋಟರಿ ಸಂಸ್ಥೆ ಕಾರ್ಯದರ್ಶಿ ಟಿ.ಎಸ್. ಕೋಮಲ, ಸಮಾಜ ಸೇವಕ ಹೆಚ್.ಎಸ್.ಚಂದ್ರಶೇಖರ್,ಗ್ರಾಪಂ ಮಾಜಿ ಸದಸ್ಯರಾದ ಕುಮಾರಸ್ವಾಮಿ ಮತ್ತು ಈಶ್ವರಪ್ಪ,ಎಸ್ಡಿ ಎಂಸಿ ಅಧ್ಯಕ್ಷ ಮಂಜುನಾಥ್,ಗ್ರಾಮದ ಉಮಾ ಮಹೇಶ್ ಮತ್ತು ಮುಖ್ಯ ಶಿಕ್ಷಕಿ ಶಿವಮ್ಮ, ಶಬೀರ್ ಸೇರಿದಂತೆ ಸಹ ಶಿಕ್ಷಕರು, ಸಂಘಟನೆ ಪದಾಧಿಕಾರಿಗಳು ಎಸ್ಡಿಎಂಸಿಯ ಪದಾಧಿಕಾರಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ರಘು ತಿಪಟೂರು