ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸಂಕಷ್ಟ ಎದುರಾಗಿದ್ದು, ಪಕ್ಷದ ಚಟುವಟಿಕೆಗಳಿಂದ ಅವರನ್ನು ದೂರ ಇಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಾವಣೆ ಮಾಡುವವರೆಗೂ ಕೇರಳದಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ. ಮುರುಳೀಧರನ್, ಸಂಸದ ಶಶಿ ತರೂರ್ ಅವರನ್ನು ನಮ್ಮ ಪಕ್ಷದಲ್ಲಿನ ನಾಯಕರು ಎಂದು ನಾವು ಪರಿಗಣಿಸುವುದಿಲ್ಲ. ಅವರು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ತಮ್ಮ ಮನಸ್ಥಿತಿಯನ್ನು ಬದಲಾಯಿಸಲಿ. ಅಲ್ಲಿಯವರೆಗೆ ರಾಜ್ಯದಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳಿಗೆ ಅವರನ್ನು ಕರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ನಿಲುವಿಗೆ ಧಕ್ಕೆಯುಂಟು ಮಾಡುತ್ತಿರುವ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂದು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಸಂಸದ ತರೂರ್ ಅವರನ್ನು ತಿರುವನಂತಪುರಂನಲ್ಲಿನ ಯಾವುದೇ ಸಭೆ ಸಮಾರಂಭಗಳಲ್ಲಿ ಆಹ್ವಾನಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಮೊದಲು ತರೂರ್ ಯಾವ ಪಕ್ಷದಲ್ಲಿ ಇದ್ದಾರೆ ಎಂದು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಸಂಸದ ಶಶಿ ತರೂರ್ ಅವರು ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕೇಂದ್ರ ಸರ್ಕಾರವನ್ನು ತರೂರ್ ಕೊಂಡಾಡಿದ್ದರು. ಅಲ್ಲದೆ ಇದರ ಮುಂದುವರೆದ ಭಾಗವಾಗಿಯೇ ಕೇಂದ್ರ ಸರ್ಕಾರ ಅವರನ್ನು ವಿದೇಶಕ್ಕೆ ಕಳುಹಿಸಿತ್ತು. ಭಯೋತ್ಪಾದನೆಯ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕುರಿತು ಜಗತ್ತಿಗೆ ತಿಳಿಸಲು ದೇಶದ ಸಂಸದರ ನಿಯೋಗವನ್ನು ಹಲವು ರಾಷ್ಟ್ರಗಳಿಗೆ ಕಳುಹಿಸಲಾಗಿತ್ತು. ಅದರಲ್ಲಿ ತರೂರ್ ಒಂದು ನಿಯೋಗವನ್ನು ಮುನ್ನಡೆಸಿದ್ದರು. ಗಡಿಯಾಚೆಗೂ ಭಾರತದ ಯಶೋಗಾಥೆಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ತರೂರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಹತ್ತಿರವಾಗಿದ್ದರು.
ಈ ಎಲ್ಲ ಕಾರಣಗಳಿಂದಲೇ ಶಶಿ ತರೂರ್ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಇತ್ತೀಚಿಗೆ ತರೂರ್ ನೀಡಿರುವ ಹೇಳಿಕೆಯೊಂದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಅದರಲ್ಲಿ ದೇಶ ಮೊದಲು, ರಾಜಕೀಯ ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಸಾಧನಗಳಾಗಿವೆ ಎಂದಿದ್ದರು. ಈ ನನ್ನ ಅಭಿಪ್ರಾಯದಲ್ಲಿ ನೀವು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದು ಎಂದು ಹೇಳಿದ್ದರು. ಈ ಹೇಳಿಕೆಯು ಕೈ ನಾಯಕರೂ ತರೂರ್ ವಿರುದ್ಧ ಉರಿದು ಬೀಳಲು ಕಾರಣವಾಗಿದೆ. ಹೀಗಾಗಿ ಮೋದಿ ಹೊಗಳಿದ್ದು, ದೇಶದ ಪರ ಧ್ವನಿ ಎತ್ತಿದ್ದಕ್ಕೆ ಇದೀಗ ಶಶಿ ತರೂರ್ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.