1) CM ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ನೋಟಿಸ್
ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ, ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ರು. ಇದನ್ನು ಪ್ರಶ್ನಿಸಿ ಕೆ. ಶಂಕರ್ ಎಂಬುವರು ಮೇಲ್ಮನವಿ ಸಲ್ಲಿಸಿದ್ರು. ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿ ಸದಸ್ಯ ಪೀಠ, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ. 2023ರ ಚುನಾವಣೆಯಲ್ಲಿ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಆಮಿಷಗಳ ಮೂಲಕ ಮತದಾರರನ್ನು ತಮ್ಮೆಡೆಗೆ ಸೆಳೆಯುವುದು, ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಸಿದ್ದರಾಮಯ್ಯನರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು, ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ಆಗ್ರಹಿಸಿದ್ದರು. ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ರು. ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, ಶಂಕರ್ ಅವರ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
2) ರಾಜ್ಯದ 224 ಎಂಎಲ್‌ಎಗಳು ಅನರ್ಹ ಫಿಕ್ಸಾ?
ರಾಜ್ಯದ 224 ಎಂಎಲ್‌ಎಗಳು ಅನರ್ಹವಾಗುವುದು ಖಚಿತವಾಗಿದೆ ಎಂದು, ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ನೋಟಿಸ್ ನೀಡಿದ್ದು, ಈ ವಿಚಾರವಾಗಿ, ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಪೀಲ್ ಫೈಲ್ ಮಾಡಿದ್ದೆವು. ಸುಪ್ರೀಂಕೋರ್ಟ್ ವಿಚಾರಣೆ ಮಾಡಿದ್ದು, ಇದರಲ್ಲಿ ಹಲವಾರು ತಪ್ಪುಗಳು, ಲೋಪದೋಷಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಮಾಡಿರುವುದು ಅಪರಾಧ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಘನ ನ್ಯಾಯಾಲಯದ ನ್ಯಾಯದ ಮುಂದೆ ಯಾವುದೇ ಅಧಿಕಾರ, ಅಂತಸ್ತು ಉಳಿಯುವುದಿಲ್ಲ ಎಂಬುದಕ್ಕೆ ಪ್ರತ್ಯೆಕ್ಷ ಸಾಕ್ಷಿಯಾಗಿದೆ. ಅತೀ ಶೀಘ್ರದಲ್ಲೇ ಉಚಿತ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ನಂಬಿಕೆಯಿದೆ. ಎರಡು ವಾರದಲ್ಲಿ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್‌ಗೆ ಹಾಜರಾಗಬೇಕಿದೆ ಎಂದು ಹೇಳಿದರು.
3) ಹೊರಟ್ಟಿ ಪಕ್ಷಾತೀತವಾಗಿ ನಡೆದುಕೊಳ್ತಾ ಇಲ್ವಂತೆ!
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪಕ್ಷಾತೀತವಾಗಿ ನಡೆದುಕೊಳ್ತಾ ಇಲ್ವಂತೆ. ಹೀಗಂತ ಎಂಎಲ್‌ಸಿ ನಾಗರಾಜ್ ಯಾದವ್ ಆರೋಪ ಮಾಡಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರಂತೆ. ಬಿಜೆಪಿಯವರನ್ನು ಓಲೈಸಲು ನಮಗೆ ಮಾತನಾಡಲು ಅವಕಾಶವನ್ನೇ ಕೊಡ್ತಿಲ್ಲ. ಆ ಮೂಲಕ ಹೊರಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ತಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರ ಫೋನ್‌ಕಾಲ್ ಲಿಸ್ಟ್‌ಗಳನ್ನೂ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರಲಿದೆ. ಜೊತೆಗೆ ನೇಮಕಾತಿಗಳಲ್ಲಿಯೂ ಹೊರಟ್ಟಿ ಅವ್ಯವಹಾರ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಿ.ಟಿ. ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದ ಬಗ್ಗೆ, ದೂರು ಕೊಟ್ಟಾಗ ನಾನು ಆ ಮಾತು ಕೇಳಿಸಿಕೊಂಡಿಲ್ಲ ಅಂದಿದ್ದರು. ನೈತಿಕತೆ ಕಳೆದುಕೊಂಡ ಮೇಲೆ ಅವರು ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು, ನಾಗರಾಜ್ ಯಾದವ್ ಆಗ್ರಹಿಸಿದ್ದಾರೆ.
4) ನಾಗರಾಜ್ ಯಾದವ್‌ಗೆ ಬಸವರಾಜ್ ಹೊರಟ್ಟಿ ಸವಾಲು
ಇನ್ನು, ತಮ್ಮ ಮೇಲಿನ ಆರೋಪಗಳಿಗೆ ಬಸವರಾಜ್ ಹೊರಟ್ಟಿ ಕೆಂಡಾಮಂಡಲರಾಗಿದ್ದಾರೆ. ನಾಗರಾಜ್ ಯಾದವ್ ಹೇಳಿರೋದನ್ನು ಸಾಬೀತು ಮಾಡಿದರೆ ನಾನು ಈ ಕುರ್ಚಿಯಲ್ಲಿ ಒಂದೇ ಒಂದು ನಿಮಿಷ ಕೂರುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಸಣ್ಣಪುಟ್ಟ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನೇ ನಾನು ಅಮಾನತು ಮಾಡಿದ್ದೇನೆ. ಹೀಗಾಗಿ ಆರೋಪ ಮಾಡಿ ದಾಖಲೆ ಕೊಡಲಿಲ್ಲ ಅಂದರೆ, ಅಂತವರನ್ನ ನಾನು ಹೇಡಿ ಎನ್ನುತ್ತೇನೆ ಎಂದು ಹೊರಟ್ಟಿ ಹೇಳಿದ್ರು. ಸದನದಲ್ಲಿ ಹೆಬ್ಬಾಳ್ಕರ್ ಮತ್ತು ಸಿ.ಟಿ. ರವಿ ಗಲಾಟೆ ವಿಚಾರ ಕುರಿತ ಆರೋಪಕ್ಕೂ ಉತ್ತರಿಸಿರುವ ಬಸವರಾಜ್ ಹೊರಟ್ಟಿ, ಆ ಬಗ್ಗೆ ಸೆಕ್ರೆಟರಿಗಳನ್ನ ಕೂರಿಸಿಕೊಂಡು ಚರ್ಚೆ ಮಾಡಲಾಗಿದೆ. ವಿಚಾರವನ್ನು ನೀತಿ-ನಿರೂಪಣೆ ಸಮಿತಿಗೆ ನೀಡಲಾಗಿದೆ. ಈಗಾಗಲೇ 2 ಬಾರಿ ಸಮಿತಿ ಸಭೆ ನಡೆಸಿದ್ದು, ಇಬ್ಬರನ್ನೂ ಕರೆಸಿ ಮಾತಾಡಿಸಿದ್ದಾರೆ. ತೀರ್ಮಾನ ಇನ್ನೂ ಸಮಿತಿ ಮುಂದಿದೆ. ಹೀಗಿರುವಾಗ ಸದನದ ಸದಸ್ಯರಾಗಿರುವ ನಾಗರಾಜ್ ಯಾದವ್, ಘಟನೆ ನಡೆದು ವರ್ಷದ ಬಳಿಕ ಏಕೆ ಮಾತನಾಡುತ್ತಿದ್ದಾರೆ? ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.
5) ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರ ಬಂದ್
ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ಮೆರೆದಿದ್ದು, ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು, ಸೆಂಟ್ರಲ್ ಬಸ್ ಸ್ಟ್ಯಾಂಡ್‌ನಲ್ಲಿ ಉದ್ಧಟತನ ಪ್ರದರ್ಶಿಸಿದ್ದು, ಠಾಕ್ರೆ ಬಣದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಕೆಲವು ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಿಸಲು ಯತ್ನಿಸುತ್ತಿರುವ ಹಿನ್ನೆಲೆ, ಪೊಲೀಸರು ಬೆಳಗಾವಿಯಲ್ಲಿ ಮತ್ತು ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಸ್ ಸಂಚಾರ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ ಕಾರಣ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರವನ್ನು ಬಂದ್ ಮಾಡಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಿದ್ದು, ಎಂಇಎಸ್ ಮುಖಂಡ ಮಾಳೋಜಿ ಅಷ್ಟೇಕರ್ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
6) ಡಿ. 10ರಂದು ಸುವರ್ಣಸೌಧದ ಬಳಿ ಪಾದಯಾತ್ರೆ
ಡಿಸೆಂಬರ್ 10 ರಂದು ಸುವರ್ಣಸೌಧದ ಬಳಿ ಪಾದಯಾತ್ರೆ ಮಾಡಲು ಮುಂದಾಗಿದ್ದೀವಿ ಎಂದು, ಹಾವೇರಿ ನಗರದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಸಾಂವಿಧಾನ ಬದ್ದ ನ್ಯಾಯಕ್ಕಾಗಿ 5 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಮೊದಲ ಅಧಿವೇಶನದಲ್ಲಿ ನಾವೇ ಮೊದಲ ಬಾರಿಗೆ ಮುತ್ತಿಗೆ ಹಾಕಿದ್ದು. ಯಡಿಯೂರಪ್ಪ ಸಿಎಂ ಆದಾಗಲೂ ಬೆಳಗಾವಿಯಲ್ಲಿ ಪಾದಯಾತ್ರೆ ಮಾಡಿದ್ದೇವೆ. ಈ ಸರ್ಕಾರ ಬಂದ್ಮೇಲೆ ನಮಗೆ ಏನು ಕಿಮತ್ತು ಕೊಡಲಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಲಾಠಿ ಚಾರ್ಜ್ ಮಾಡಿದ್ದಾರೆ. ಲಿಂಗಾಯತರ ಇತಿಹಾಸದಲ್ಲಿ ನಡೆದ ಮೊದಲ ದೌರ್ಜನ್ಯವಿದು. ನಮ್ಮ ಸಮುದಾಯದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಡಿಸೆಂಬರ್ ಹತ್ತನ್ನು ಲಿಂಗಾಯತರ ಮೇಲೆ ನಡೆದ ದೌರ್ಜನ್ಯ ದಿನವಾಗಿ ಆಚರಣೆ ಮಾಡ್ತಿದ್ದೇವೆ.
ಆ ದಿನದಂದು ನಾವು ಮೌನವಾದ ಪಥ ಸಂಚಲನ ಮಾಡ್ತೀವೆ. ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬೇಡಿ ಅನ್ನೋ ಸಂದೇಶ ಮುಟ್ಟಿಸಿದ್ದೇವೆ. ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣ ಸೌಧದವರೆಗೂ ಪಾದಯಾತ್ರೆ ಮಾಡ್ತೀವಿ. ರಾಜಕಾರಣಿಗಳ ಸಹಕಾರವನ್ನ ಕೇಳ್ತೀವಿ. ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಿಎಂ ಮೀಸಲಾತಿ ಕೇಳುವುದನ್ನ ಸಂವಿಧಾನದ ವಿರೋಧಿ ಅನ್ನೋದು ತಪ್ಪು. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ರು.
7) “ನಮ್ಮ ರಕ್ತದಲ್ಲಿ ಕನ್ನಡವಿದೆ, ಕನ್ನಡ ಶಾಲೆ ಮುಚ್ಚಲ್ಲ”
ನಮ್ಮ ರಕ್ತದಲ್ಲಿ ಕನ್ನಡವಿದೆ. ಹಾಗಾಗಿ ಕನ್ನಡ ಮಾಧ್ಯಮದ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಹೀಗಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಚಿದಾನಂದ್ ಎಂ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಕೆಪಿಎಸ್ ಶಾಲೆಯನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮವಹಿಸಲಾಗುವುದು. ನಾವು ಬಜೆಟ್‌ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿದ್ದೇವೆ . 2025-26ನೇ ಸಾಲಿನಲ್ಲಿ ಈಗಾಗಲೇ ಕಾರ್ಯಾಚರಣೆಯಲ್ಲಿರುವ 309 ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತರಗತಿವರೆಗೆ, ಒಟ್ಟು 2,72,464 ವಿದ್ಯಾರ್ಥಿಗಳು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕೆಪಿಎಸ್ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ನಂತರ ಪರಿಪೂರ್ಣವಾಗಿ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆ ತರ್ಕಬದ್ಧಗೊಳಿಸಿ, ಕೆಪಿಎಸ್ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ರು.
8) ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ
ಬೆಂಗಳೂರಿನ ತಾಪಮಾನ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ತಾಪಮಾನ ಮತ್ತಷ್ಟು ಕುಸಿಯಲು ಕಾರಣ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 15 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ, X ಖಾತೆಯಲ್ಲಿ ಹವಾಮಾನ ವರದಿಯನ್ನು ಹಂಚಿಕೊಂಡಿದ್ದು, ರಾಜ್ಯದಾದ್ಯಂತ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ, ಬೆಳಗ್ಗೆ ಶೀತ ಮತ್ತು ಮಂಜಿನ ಪರಿಸ್ಥಿತಿ ಇರುವುದಾಗಿ ಹೇಳಿದೆ.
9) “ಅನ್ನಭಾಗ್ಯ”ಅಕ್ರಮ – 570 ಮಂದಿ ಅಂದರ್
ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ, ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಮುನಿಯಪ್ಪ ಉತ್ತರಿಸಿದ್ದಾರೆ. ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ, ಒಟ್ಟು 29,603.15 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 314 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೀಟಿದಾರರು ಪಡಿತರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಕಂಡುಬಂದಲ್ಲಿ, ಸದರಿ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ನ್ಯಾಯಬೆಲೆ ಅಂಗಡಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದ್ರು.
10) ಜೀವಬಿಟ್ಟ ಮಗ, ತಾಯಿ, ಅಜ್ಜಿ!
ಮಗನನ್ನು ಕೊಂದು ಬಳಿಕ ತಾಯಿ ಮತ್ತು ಅಜ್ಜಿ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬೆಂಗಳೂರು ನಗರದ ಕೋರಮಂಗಲದ ತಾವರೆಕೆರೆ ಬಳಿಯ, ಎಸ್.ಜಿ.ಪಾಳ್ಯದಲ್ಲಿ ನಡೆದಿದೆ. 14 ವರ್ಷದ ಮೌನೀಶ್, 38 ವರ್ಷದ ಸುಧಾ, ಅಜ್ಜಿ ಮುದ್ದಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಸ್.ಜಿ.ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ವರ್ಷಗಳ ಹಿಂದೆ ಸುಧಾ ಪತಿಯಿಂದ ಬೇರೆಯಾಗಿದ್ದರು. ತಾಯಿ ಮುದ್ದಮ್ಮ ಜೊತೆಗೆ ಸುಧಾ ಮತ್ತು ಮೌನೀಶ್ ವಾಸಿಸುತ್ತಿದ್ದರು. ಅಮ್ಮ-ಮಗಳು ಮೊದಲು ಸಣ್ಣ ಹೋಟೆಲ್‌ನಲ್ಲಿ ಬಿರಿಯಾನಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಸ್ ಆದ ಬಳಿಕ ಚಿಪ್ಸ್ ಹಾಗೂ ಹಾಲು ಮಾರುತ್ತಿದ್ದರು. ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಸಾಲ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಮೂಲತಃ ತಮಿಳುನಾಡಿನವರು. ನಿನ್ನೆ ಧರ್ಮಪುರಿಯ ಒಂದು ದೇವಾಲಯಕ್ಕೆ ಹೋಗಿ ಬಂದಿದ್ದರು. ಬಾಲಕ ಕ್ರೈಸ್ಟ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಾವಿಗೆ ಕಾರಣ ಏನೆಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು, ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.



