www.karnatakatcv.net :: ಹೈದರಾಬಾದ್: ತೆಲುಗು ನಟ ಸಾಯಿ ಧರ್ಮ ತೇಜ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮ ತೇಜ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಟಾಲಿವುಡ್ ನಟ ಸಾಯಿ ಧರ್ಮ ತೇಜ್ ತಮ್ಮ ಬೈಕ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ನಟ ಧರ್ಮ ತೇಜ್, ಬೈಕ್ ರೈಡಿಂಗ್ಗೆ ಸ್ನೇಹಿತರಾದ ಸಂದೀಪ್ ಕಿಷನ್, ವೈವಾ ಹರ್ಷಾ ಎಂಬುವರ ಜೊತೆ ರೈಡಿಂಗ್ಗೆ ತೆರಳಿದ್ದರು. ಈ ವೇಳೆ ಹೈದ್ರಾಬಾದ್ ನ ಮಾದಾಪುರ ಬ್ರಿಡ್ಜ್ ಬಳಿ ಬೈಕ್ ಸ್ಕಿಡ್ ಆಗಿ ಧರ್ಮ ತೇಜ್ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನು ಈ ಬ್ರಿಡ್ಜ್ ಬಳಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಅಂತ ಹೇಳಲಾಗ್ತಿದೆ. ಇನ್ನು ಈ ಅಪಘಾತಕ್ಕೆ ಬೈಕ್ ನ ವೀಲ್ ಸ್ಕಿಡ್ ಆಗಿದ್ದೇ ಕಾರಣ ಅಂತ ತಿಳಿದುಬಂದಿದೆ.
ಇನ್ನು ಬೈಕ್ ರೈಡಿಂಗ್ ಅಂದ್ರೆ ನಟ ಧರ್ಮತೇಜ್ ಗೆ ಪಂಚಪ್ರಾಣ. ಹೀಗಾಗಿ ತಮ್ಮ ಬಳಿ ಹಾರ್ಲೇ ಡೇವಿಡ್ಸನ್, ಆವೆಂಜರ್ ಸೇರಿದಂತೆ ನಾಲ್ಕು ಸ್ಫೋರ್ಟ್ಸ್ ಬೈಕ್ ಗಳನ್ನೂ ತೇಜ್ ಹೊಂದಿದ್ದಾರೆ.
ಇನ್ನು ರೈಡಿಂಗ್ ಸೂಟ್ ಮತ್ತು ಹೆಲ್ಮೆಟ್ ಧರಿಸಿದ್ದ ಹೊರತಾಗಿಯೂ ನಟ ಧರ್ಮ ತೇಜ್ ತಲೆ, ಕೈಗಳು ಮತ್ತು ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದನ್ನು ಗಮನಿಸಿದ್ರೆ ಅತಿಯಾದ ವೇಗದಲ್ಲಿ ಬೈಕ್ ಓಡಿಸುತ್ತಿದ್ದೇ ಅಪಘಾತಕ್ಕೆ ಕಾರಣ ಅಂತ ಸ್ಪಷ್ಟವಾಗುತ್ತಿದೆ.
ಇನ್ನು ನಿನ್ನೆ ಗಣೇಶ ಹಬ್ಬವಾದ್ದರಿಂದ ರಸ್ತೆಗಳೂ ಕೂಡ ಖಾಲಿಯಿತ್ತು. ಹೀಗಾಗಿ ಫ್ರೀ ಇದ್ದ ರಸ್ತೆಯಲ್ಲಿ ಹೈಸ್ಪೀಡ್ ನಲ್ಲಿ ರೈಡ್ ಮಾಡ್ತಿದ್ದ ನಟ ಇದೀಗ ಆಸ್ಪತ್ರೆಯಲ್ಲಿರುವಂತೆ ಮಾಡಿದೆ. ಸದ್ಯ ಧರ್ಮತೇಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಗಂಭೀರ ಗಾಯಗಳಾಗಿಲ್ಲ. ಇನ್ನು ಸ್ನೇಹಿತರೊಂದಿಗೆ ರೈಡಿಂಗ್ ಮಾಡುತ್ತಿದ್ದ ವೇಳೆ ನಟ ಯಾವುದೇ ರೀತಿ ಮದ್ಯಪಾನ ಮಾಡಿರಲಿಲ್ಲ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿರೋ ಪೊಲೀಸರು, ತೇಜ್ ವಿರುದ್ದ ನಿರ್ಲಕ್ಷ್ಯ ಹಾಗೂ ಅತಿಯಾದ ವೇಗದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ನಟ ಧರ್ಮ ತೇಜ್ ಹೈದ್ರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅತಿಯಾದ್ರೆ ಯಾವುದೂ ಒಳ್ಳೇದಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

