1. ಕರ್ನಾಟಕ ಜನತೆಗೆ ಬಿಗ್ ಶಾಕ್,ಬಸ್ ಪ್ರಯಾಣ ದರ ಶೇ 15ರಷ್ಟು ಏರಿಕೆ
ಶಕ್ತಿ ಯೋಜನೆ, ಡೀಸೆಲ್ ದರ ಏರಿಕೆ ಸೇರಿದಂತೆ ಇತ್ಯಾದಿ ಕಾರಣಗಳಿಂದ ಸರ್ಕಾರ ನಷ್ಟಕ್ಕೆ ಸಿಲುಕಿದೆ. ಹೀಗಾಗಿ ಅನಿವಾರ್ಯವಾಗಿ ಬಸ್ ಟಿಕೆಟ್ ದರವನ್ನು 15% ಏರಿಕೆ ಮಾಡಿದೆ.ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು. ಟಿಕೆಟ್ ದರ ಏರಿಕೆ ಅನಿವಾರ್ಯವಾಗಿ ಮಾಡಲೇಬೇಕಿತ್ತು. 15% ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಬಿಜೆಪಿ ಅವರು ಸಾವಿರಾರು ಕೋಟಿ ಸಾಲ ಉಳಿಸಿ ಹೋಗಿದ್ದರು. ಸಾರಿಗೆ ಸಂಸ್ಥೆಗಳು ಉಳಿಬೇಕು ಹೀಗಾಗಿ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು.ನಾಲ್ಕು ನಿಗಮಗಳಿಗೆ ಬೇರೆ ಬೇರೆ ದರ ಏರಿಕೆ ಆಗಿದೆ. ಬಿಎಂಟಿಸಿಯಿಂದ 42%, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ 28% ದರ ಏರಿಕೆಗೆ ಮಾಡಲಾಗಿದೆ. ಇನ್ನು ಈ ಹಿಂದೆ 2020 ಫೆಬ್ರವರಿ 26ರಂದು ಕೆಎಸ್ ಆರ್ ಟಿಸಿ ,ಕೆಕೆಆರ್ ಟಿಸಿ ಹಾಗೂ ಎನ್ ಡಬ್ಲೂ ಕೆಎಸ್ ಆರ್ ಟಿ 12% ಏರಿಕೆಯಾಗಿತ್ತು. 2014 ರಲ್ಲಿ ಬಿಎಂಟಿಸಿ 17% ಬಸ್ ದರ ಏರಿಕೆ ಮಾಡಿತ್ತು. ನಂತರ ತರ 2015 ರಲ್ಲಿ 2% ಕಡಿಮೆ ಮಾಡಿ 15% ದರ ಕಡಿಮೆ ಮಾಡಲಾಗಿತ್ತು.
2. ನೀರಿನ ದರ ಏರಿಕೆ ಫಿಕ್ಸ್!,ಜನವರಿ 2 ರಿಂದಲೇ ನಿರ್ಧಾರ
ಸಿಲಿಕಾನ್ ಸಿಟಿಯಲ್ಲಿ ನೀರಿನ ದರ ಏರಿಕೆಯ ಸುಳಿವು ಸಿಕ್ಕಿದ್ದು, ಜನವರಿ 2ನೇ ವಾರವೇ ದರ ನಿರ್ಧಾರ ಆಗುವ ಸಾಧ್ಯತೆ ಇದೆ.ನೀರಿನ ದರ ಏರಿಕೆ ಬಗ್ಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಮಾತನಾಡಿ, ಜನವರಿ ಎರಡನೇ ವಾರ ಬೆಂಗಳೂರು ಶಾಸಕರ ಜೊತೆ ಡಿಸಿಎಂ ಸಭೆ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.ಜಲಮಂಡಳಿ 1000 ಲೀಟರ್ ನೀರು ಪೂರೈಕೆ ಮಾಡುವುದಕ್ಕೆ 52 ರೂಪಾಯಿ ಖರ್ಚು ಮಾಡ್ತಿದೆ. ಆದರೆ, 25 ರಿಂದ 40 ರೂ. ಮಾರುತ್ತಾ ಇದ್ದೇವೆ. ಇದರಿಂದ ಜಲಮಂಡಳಿಗೆ ನಷ್ಟ ಆಗ್ತಿದೆ. ಪ್ರತಿ ತಿಂಗಳಿಗೆ ಜಲಮಂಡಳಿಗೆ 41 ಕೋಟಿ ರೂಪಾಯಿ ನಷ್ಟ ಆಗ್ತಿದೆ ಎಂದು ಹೇಳಿದರು.ಕಾವೇರಿ ಐದನೇ ಹಂತ ಆದ ಮೇಲೆ 82 ಕೋಟಿ ನಷ್ಟ ಆಗುತ್ತೆ. ವಾರ್ಷಿಕವಾಗಿ ಸಾವಿರಾರು ಕೋಟಿ ನಷ್ಟ ಆಗ್ತಿದೆ. ಹಾಗಾಗಿ ದರ ಏರಿಕೆ ಮಾಡಬೇಕಿದೆ. ಜಲಮಂಡಳಿಗೆ ಆರ್ಥಿಕ ಹೊರೆಯಾಗ್ತಿದೆ. ಶಾಸಕರ ಸಭೆ ಬಳಿಕ ನೀರಿನ ದರ ಏರಿಕೆ ಆಗುತ್ತೆ ಎಂದರು.ಎಷ್ಟು ಪರ್ಸೆಂಟೇಜ್ ಏರಿಕೆ ಆಗುತ್ತೆ ಅನ್ನೋದು ನಿರ್ಧಾರ ಆಗುತ್ತೆ. ಉಪಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ. ಬೆಂಗಳೂರಿನ ಎಲ್ಲಾ ಶಾಸಕರಿಗೂ ಜಲಮಂಡಳಿ ನಷ್ಟದ ಬಗ್ಗೆ ಪತ್ರದಲ್ಲಿ ವಿವರಿಸಿದ್ದೇವೆ ಎಂದು ತಿಳಿಸಿದರು.
3.ಮೈಸೂರಿನಲ್ಲಿ ಮುಂದುವರಿದ ರಸ್ತೆ ರಾದ್ಧಾಂತ, ರಾತ್ರೋರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ರಾಜಕೀಯ ಜೋರಾಗಿದೆ. ಸಿದ್ದರಾಮಯ್ಯ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳ ಸದಸ್ಯರು, ಮಂಗಳವಾರ ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಸ್ಟಿಕ್ಕರ್ ಅಂಟಿಸಿ ಪೂಜೆ ಮಾಡಿದ್ದರು. ಆರೆ, ರಾತ್ರೋ ರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವುಗೊಳಿಸಲಾಗಿದೆ. ವಿವಿಧೆಡೆ ಅಳವಡಿಸಿದ್ದ ಪ್ರಿನ್ಸಸ್ ರಸ್ತೆ ನಾಮಫಲಕವನ್ನು ತೆರವುಗೊಳಿಸಿದ್ದು ಅಧಿಕಾರಿಗಳೋ, ಪೊಲೀಸರು ಎಂಬ ಪ್ರಶ್ನೆ ಮೂಡಿದೆ.ವಿವಿಧ ಸಂಘಟನೆಗಳು ಬುಧವಾರ ಅಂಟಿಸಿದ್ದ ಪ್ರಿನ್ಸಸ್ ರಸ್ತೆ ಸ್ಟಿಕ್ಕರ್ನಲ್ಲಿ, 1921ರಲ್ಲಿ ನಾಲ್ವಡಿ ಅವರಿಂದ ಪ್ರಿನ್ಸಸ್ ರಸ್ತೆ ಉದ್ಘಾಟನೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಸ್ಟಿಕ್ಕರ್ನಲ್ಲಿ ನಾಲ್ವಡಿ ಹಾಗೂ ಕೃಷ್ಣಾಜಮ್ಮಣ್ಣಿ ಅವರ ಭಾವಚಿತ್ರವಿತ್ತು.ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ದಾಖಲೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ, ಪ್ರಿನ್ಸಸ್ ರಸ್ತೆ ಎಂದು ಹೆಸರಿರುವ ನಾಮಫಲಕ ಲಭ್ಯವಾಗಿದೆ. ಯಾದವಗಿರಿ ರೈಲ್ವೆ ಬಡಾವಣೆಯ ಮನೆಗೆ ನಾಮಫಲಕ ಅಳವಡಿಸಲಾಗಿದೆ. ಮನೆ ನೇಮ್ ಬೋರ್ಡ್ನಲ್ಲಿ ಪ್ರಿನ್ಸಸ್ ರಸ್ತೆ ಎಂದು ನಮೂದಿಸಲಾಗಿದೆ.ಇಷ್ಟೇ ಅಲ್ಲ ರಸ್ತೆಗೆ ಪ್ರಿನ್ಸೆಸ್ ಹೆಸರಿತ್ತು ಎಂಬುದಕ್ಕೆ ಮತ್ತೊಂದು ಮಹತ್ವದ ದಾಖಲೆ ಲಭ್ಯವಾಗಿದೆ. 1921ರಲ್ಲಿ ಪ್ರಿನ್ಸೆಸ್ ರಸ್ತೆ ಎಂದು ನಮೂದಾಗಿರುವ ನಕ್ಷೆಗೆ ನಗರಾಭಿವೃದ್ಧಿ ಟ್ರಸ್ಟ್ ಬೋರ್ಡ್ ಮೈಸೂರು ಚೇರ್ಮನ್ ಸಹಿ ಹಾಕಿದ್ದಾರೆ.ಮೈಸೂರು ಪಾಲಿಕೆ ಕಚೇರಿಗೆ ತೆರಳಿ ಆಯುಕ್ತರನ್ನು ಭೇಟಿಯಾಗಿ ಸ್ನೇಹಮಯಿ ಕೃಷ್ಣ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ. ಪ್ರಿನ್ಸೆಸ್ ರಸ್ತೆಗೆ ದಾಖಲೆಗಳಿವೆ, ಸಿಎಂ ಹೆಸರು ಇಡೋದು ಬೇಡ. ಪ್ರಿನ್ಸೆಸ್ ರಸ್ತೆ ಅಂತಲೇ ಉಳಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದೆ.ಇತ್ತ ಸಿಎಂ ಜತೆ ರಸ್ತೆ ಬಗ್ಗೆ ಮಾತನಾಡುತ್ತೇನೆ ಎಂದು ‘ಟಿವಿ9’ಗೆ ಪ್ರೊಫೆಸರ್ ನಂಜರಾಜೇ ಅರಸ್ ಹೇಳಿದ್ದಾರೆ. ಸಿದ್ದರಾಮಯ್ಯರೇ ಹೆಸರು ಬೇಡ ಎನ್ನುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಯಾರನ್ನೂ ಮೆಚ್ಚಿಸಲು ಕೆಲಸ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.ಈ ವಿಚಾರವಾಗಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಪ್ರಿನ್ಸೆಸ್ ರಸ್ತೆ ಎಂದು ರೈಲ್ವೆ ಇಲಾಖೆ ದಾಖಲೆಗಳಲ್ಲಿ ಇದೆ. ಮಹಾರಾಜರ ಹೆಸರು ತೆಗೆದು ಬೇರೆಯವರ ಹೆಸರಿಡುವುದು ಸರಿಯಲ್ಲ ಎಂದಿದ್ದಾರೆ.ಒಂದೆಡೆ ಮೈಸೂರಿನ ಕೆಆರ್ಎಸ್ ರಸ್ತೆಗೆ ಹೆಸರಿರುವ ಪುರಾವೆಗಳೇ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಮತ್ತೊಂದೆಡೆ, ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಬೇಡ. ಈಗಾಗ್ಲೇ ಸಾಕಷ್ಟು ದಾಖಲೆಗಳಿವೆ ಎಂದು ಸಾಮಾಜಿಕ ಹೋರಾಟಗಾರರು ಒಂದೊಂದೇ ದಾಖಲೆಗಳನ್ನು ರಿಲೀಸ್ ಮಾಡುತ್ತಿದ್ದಾರೆ.
4. ವಕ್ಫ್ ಕಾನೂನು ರದ್ದಾಗಬೇಕು!,ನಿರಂತರ ಹೋರಾಟಕ್ಕೆ ಯತ್ನಾಳ್ ಸಿದ್ದ
ವಕ್ಫ್ ಕಾನೂನು ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಕ್ಫ್ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಎರಡನೇ ಹಂತದ ಹೋರಾಟದ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸಿ ಹೋರಾಟದ ರೂಪುರೇಷೆಗಳನ್ನ ರೂಪಿಸುತ್ತೇವೆ ಎಂದರು.ನಮ್ಮ ಹೋರಾಟಕ್ಕೆ ಎಲ್ಲರನ್ನು ಸ್ವಾಗತ ಮಾಡುತ್ತೇವೆ. ನಮ್ಮದು ಜನಪರ ಆಂದೋಲನ. ವಕ್ಫ್ ಆಸ್ತಿ ಎಂದು ಅವರು 3 ಪಾಕಿಸ್ತಾನ ಮಾಡುವ ಅಷ್ಟು ಜಾಗವನ್ನು ಕ್ರೈಮ್ ಮಾಡುತ್ತಿದ್ದಾರೆ. ನಮ್ಮ ಹೋರಾಟದಿಂದಲೇ ವಕ್ಫ್ ಆಂದೋಲನ ಇಡೀ ದೇಶದಲ್ಲಿ ಅಗ್ತಿದೆ. ವಕ್ಫ್ ಕಾನೂನು ರದ್ದು ಮಾಡಬೇಕು ಎಂಬ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ವಕ್ಫ್ ಆಸ್ತಿ ಇದು ನಮ್ಮ ಆಸ್ತಿ, ಹಿಂದೂಗಳ ಆಸ್ತಿ ಎಂದು ತಿಳಿಸಿದರು.2 ಮತ್ತು 3 ಹಂತದ ವಕ್ಫ್ ಹೋರಾಟ ಮುಗಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡುತ್ತೇವೆ. ವಕ್ಫ್ ಕಾನೂನು ರದ್ದು ಮಾಡುವಂತೆ ಮೋದಿ ಅವರಿಗೆ ಮನವಿ ಮಾಡುತ್ತೇವೆ. ವಕ್ಫ್ ಕಾನೂನು ರದ್ದಾಗಬೇಕು. ಇದು ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು
5. ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನ ನೇಮಿಸಿ,ಜಾರಕಿಹೊಳಿ ಲೆಕ್ಕಾಚಾರ ಏನು..?
ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ರಾಜ್ಯಧ್ಯಾಕ್ಷ ಹುದ್ದೆಗೆ ತೀವ್ರ ಚರ್ಚೆ ನಡೀತಿದೆ. ಇನ್ನು ಈ ಎರಡೂ ಪಕ್ಷಗಳಲ್ಲಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಚಟುವಟಿಕೆ ನಡೀತಿರೋ ಬೆನ್ನಲ್ಲೇ , ಸದ್ಯ ಕಾಂಗ್ರೆಸ್ ನಲ್ಲೂ ಇಂಥದ್ದೇ ಚರ್ಚೆ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅಂತ ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂತದ್ದೊಂದು ಚರ್ಚೆ ಹುಟ್ಟುಹಾಕುವಂತೆ ಮಾಡಿದ್ದಾರೆ. ಒಬ್ಬರೇ ಎರಡೆರಡು ಹುದ್ದೆಯಲ್ಲಿದ್ದರೆ ತಮ್ಮ ಜವಬ್ದಾರಿ ನಿಭಾಯಿಸೋದು ಕಷ್ಟ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇ ಬೇಕು ಅನ್ನೋದು ಎಲ್ಲರ ಅಭಿಪ್ರಾಯ ಅಲ್ಲದೇ ಇದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಲ್ಲದೇ ಇನ್ನು ಕೆಪಿಸಿಸಿಗೆ ಈಗಿರುವ ಅಧ್ಯಕ್ಷರನ್ನೇ ಮುಂದುವರಿಸಬೇಕಾ ಅಥವಾ ಹೊಸಬರಿಗೆ ಅವಕಾಶ ನೀಡಬೇಕಾ ಅನ್ನೋದು ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು .ಇದು ನಮ್ಮ ಹಂತದಲ್ಲಿ ಆಗುವಂತಹದ್ದಲ್ಲ. ಬದಲಾವಣೆ ಮಾಡುವ ನಿರ್ಧಾರ ಎಐಸಿಸಿಗೆ ಮಾತ್ರ ಇದೆ ಅಂದಿದ್ದಾರೆ. ಇನ್ನು ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಪುತ್ರ ಮೃಣಾಲ್ ಕುರಿತು ಯಾವುದೇ ಚರ್ಚೆ ಆಗಿಲ್ಲ. ಎಲ್ಲರೂ ಸೇರಿ ಚರ್ಚೆ ಮಾಡಿ ಒಬ್ಬರ ಹೆಸರು ಅಂತಿಮ ಮಾಡಿ ವರಿಷ್ಠರಿಗೆ ಕೊಟ್ಟಿದ್ದೇವೆ. ಪಕ್ಷದ ಕೆಲಸಕ್ಕೆ ಯಾರು ಹೆಚ್ಚು ಸಮಯ ಕೊಡ್ತಾರೋ ಅಂತಹ ವ್ಯಕ್ತಿಯ ಹೆಸರನ್ನು ಕೊಡಲಾಗಿದೆ ಅಂತ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಟ್ಟಿದ್ದಾರೆ.
6.ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡ್ಲಿ,ಪ್ರಿಯಾಂಕ್ ಖರ್ಗೆ ವಿರುದ್ದ ಆರ್. ಅಶೋಕ್ ಕಿಡಿ
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್‍ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ. ಈ ವೇಳೆ, ಸಚಿನ್ ಡೆತ್‍ನೋಟ್‍ನಲ್ಲಿ ಪ್ರಿಯಾಂಕ್ ಖರ್ಗೆಯವರ ಹೆಸರೂ ಇದೆ. ಅವರಿಗೆ ಗೌರವ, ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ. ಈಶ್ವರಪ್ಪ ವಿಚಾರದಲ್ಲಿ ಅವರು ಏನು ಮಾತಾಡಿದ್ರು? ಈಗ ಅದನ್ನು ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳಾಗುತ್ತಿವೆ. ವಾಲ್ಮೀಕಿ ನಿಗಮದ ಚಂದ್ರಶೇಖರ್, ದಾವಣೆಗೆರೆಯಲ್ಲಿ ಒಬ್ಬರು ಪಿಸಿ ಹತ್ಯೆ, ರುದ್ರಣ್ಣ, ಸಚಿನ್ ಅವರ ಆತ್ಮಹತ್ಯೆಯಾಗಿದೆ. ವಿಪಕ್ಷವಾಗಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಎಲ್ಲಾ ರೀತಿಯ ಹೋರಾಟ ಮಾಡಿ ಕೇಸ್ ಹಾಕಿಸಿಕೊಂಡಿದ್ದೇವೆ ಎಂದಿದ್ದಾರೆ.ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.4ರಂದು ನಾನು ಹಾಗೂ ವಿಜಯೇಂದ್ರ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ಮುಖಂಡರು ಕಲಬುರಗಿಯಲ್ಲಿ ಹೋರಾಟ ಮಾಡುತ್ತೇವೆ ಅಂತ ಆರ್. ಅಶೋಕ್ ಹೇಳಿದ್ದಾರೆ.
7. ಪ್ರಿಯಾಂಕ್ ಖರ್ಗೆಗೆ ಛಲವಾದಿ ಸವಾಲ್ ,ನನ್ನ ತಂಟೆಗೆ ಬಂದರೆ ಇನ್ನು ಸಮ್ಮನಿರಲ್ಲ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರದ ಉತ್ಕರ್ಷ ಹೆಚ್ಚುತ್ತಿದೆ. ದಲಿತ ಸಮುದಾಯದ ಪ್ರತಿನಿಧಿಯಾಗಿದ್ದರೂ ಸಮಾಜಕ್ಕೆ ಖರ್ಗೆ ಕೊಡುಗೆ ಏನೂ ಇಲ್ಲ, ದಲಿತರ ಸಮಾಧಿಗಳ ಮೇಲೆ ಅವರು ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ, ತನ್ನನ್ನು ಕೆಣಕಬೇಡವೆಂದು ಹೇಳಿದ್ದರೂ ಪದೇಪದೆ ನನ್ನ ತಂಟೆಗೆ ಬರುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ, ವೈಯಕ್ತಿಕ ವಿಚಾರಗಳನ್ನು ಕೆದಕಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೆ, ಅದರೆ ಇನ್ನು ಸುಮ್ಮನಿರಲ್ಲ, ಯಾಕೆಂದರೆ ಸಮಾಜಕ್ಕೆ ತಾನು ಉತ್ತರ ನೀಡಬೇಕಿದೆ ಎಂದು ನಾರಾಯಣಸ್ವಾಮಿ ಹೇಳಿದರು. ದಲಿತರ ಉದ್ಧಾರಕನಂತೆ ಮಾತಾಡುವ ಅವರು ಮಾತ್ರ ಮೂರು ಬಾರಿ ಗೆದ್ದು ಪ್ರತಿಸಲ ಮಂತ್ರಿಯಾಗಿದ್ದಾರೆ, ಮೂರು ಸಲ ಗೆದ್ದ ದಲಿತ ಶಾಸಕರು ಬೇಕಾದಷ್ಟಿದ್ದಾರೆ, ಅವರ್ಯಾಕೆ ಒಮ್ಮೆಯೂ ಸಚಿವ ಸ್ಥಾನ ಗಿಟ್ಟಿಸಿಲ್ಲ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
8. ಕೇಸ್ ಮುಚ್ಚಿ ಹಾಕಲು ಸರ್ಕಾರದ ಯತ್ನ, ಸಚಿನ್ ಸಹೋದರಿ ಗಂಭೀರ ಆರೋಪ
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆತಿದೆ. ಒಂದೆಡೆ, ಸಚಿನ್ ಬಳಿ ಗುತ್ತಿಗೆದಾರರ ಪರವಾನಿಗೆಯೇ ಇರಲಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದರೆ, ಮತ್ತೊಂದೆಡೆ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಎಂದು ಸಚಿನ್ ಸಹೋದರಿ ಸುರೇಖಾ ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್‌ನಲಿ ಮಾತನಾಡಿದ ಸುರೇಖಾ, ಕಲಬುರಗಿಯಲ್ಲಿ ಸಚಿನ್ ಕೆಲಸ ಮಾಡಿಲ್ಲ. ಆತ ನಮ್ಮ ಭೇಟಿಯೇ ಆಗಿಲ್ಲ. ಸಚಿನ್ ಕೈ ಬರಹವೇ ಅದಲ್ಲ. ಸಚಿನ್ ಹುಟ್ಟಿಯೇ ಇಲ್ಲ ಅಂತ ರಾಜ್ಯ ಸರ್ಕಾರ ಮಾಡಿಬಿಡುತ್ತಾರೆ ಎಂಬ ಆತಂಕ ಇದೆ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ. ಸಿಬಿಐ ತನಿಖೆ ಮಾಡಿದರೆ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ ಎಂದರು. ಡೆತ್ ನೋಟ್‍ನಲ್ಲಿ ಉಲ್ಲೇಖವಾದ ಆರೋಪಿಗಳನ್ನು ಈವರೆಗೆ ತನಿಖೆಗೆ ಒಳಪಡಿಸಿಲ್ಲ. ತನಿಖಾಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಇಲ್ಲಿವರೆಗೆ ತನಿಖಾಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಎಫ್ಎಸ್ಎಲ್ ವರದಿ, ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯಲು ಪ್ರಯತ್ನಿಸುತ್ತೇವೆ ಅಂತ ಸುರೇಖಾ ಹೇಳಿದ್ದಾರೆ.
9. ಕರೆ ಸ್ವೀಕರಿಸದ ಪ್ರಿಯಕರನಿಗೆ ಚಾಕು ಇರಿತ,ಪ್ರಿಯಕರನಿಗೆ ಚಾಕು ಚುಚ್ಚಿ ಪ್ರಿಯತಮೆ ಪರಾರಿ
ಪ್ರಿಯಕರನ ಮೇಲೆ ಮುನಿಸಿಕೊಂಡ ಪ್ರಿಯತಮೆ ಆತನಿಗೆ ಚಾಕುವಿನಿಂದ ಇರಿದಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ಹಾಸನದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ಘಟನೆ ನಡೆದಿದೆ. ಮನುಕುಮಾರ್ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಹಾಸನದಲ್ಲಿ ಹಾರ್ಡ್‌ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡಿದ್ದಾರೆ ಮನುಕುಮಾರ್. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು, ಕೆಲ ದಿನಗಳಿಂದ ದೂರವಾಗಿದ್ದರು. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಮನುಕುಮಾರ್ ಬಂದಿದ್ದರು. ಈ ವೇಳೆ ಪದೇ ಪದೇ ಮನುಕುಮಾರ್‌ಗೆ ಫೋನ್ ಮಾಡುತ್ತಿದ್ದ ಭವಾನಿ, ಆತನನ್ನು ಹುಡುಕಿಕೊಂಡು ಹೊಟೇಲ್ ಬಳಿ ಬಂದಿದ್ದಾರೆ.ಅಷ್ಟರಲ್ಲಿ ಮನುಕುಮಾರ್ ಕೂಡಾ ಗೇಟ್ ಬಳಿ ಬಂದಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಸ್ನೇಹಿತರು ಬಿಡಿಸಲು ಮುಂದಾಗಿದ್ದಾರೆ. ಸಿಟ್ಟಿಗೆದ್ದ ಭವಾನಿ, ಮನುಕುಮಾರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ. ಕೂಡಲೇ ಸ್ಮೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮನುಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.