TOP NEWS : ಇಂದಿನ ಪ್ರಮುಖ ಸುದ್ದಿಗಳು – 04/01/2025

1.ಪ್ರಿಯಾಂಕ್ ಖರ್ಗೆ ನಿವಾಸ ಮುತ್ತಿಗೆಗೆ ಯತ್ನ, ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ!

ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಶನಿವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಕಲಬುರಗಿಯ ರಸ್ತೆಯಲ್ಲಿ ಜನಸಾಗರ ಕಂಡುಬಂತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಜಗತ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು. ಪೊಲೀಸ್ ಬಿಗಿ ಭದ್ರತೆ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರತಿಭಟನಾನಿರತ ಬಿಜೆಪಿ ನಾಯಕರನ್ನು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ವಶಕ್ಕೆ ಪಡೆದರು. ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಉಮೇಶ್ ಜಾಧವ್, ಎನ್.ಮಹೇಶ್ ಮತ್ತಿತರರನ್ನು ಪೊಲೀಸ್ ವಶಕ್ಕೆ ಪಡೆದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಿಯಾಂಕ್ ಖರ್ಗೆ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

2. ವರುಣಾದಿಂದ ಸ್ಪರ್ಧೆ ಮಾಡಿದ್ರೆ ಸಿಎಂ ಸ್ಥಿತಿ ಏನು?,ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ

ಕಳೆದ ಬಾರಿ ವರುಣಾದಿಂದ ನಾನು ಸ್ಪರ್ಧೆ ಮಾಡಿದ್ರೆ ನಿಮ್ಮ ಸಿದ್ದರಾಮಯ್ಯ ಸ್ಥಿತಿ ಏನಾಗೋದು ಯೋಚಿಸಿ ಎಂದು ಕಾಂಗ್ರೆಸಿಗರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ವೇಳೆ, ನಾನು ಮೊದಲ ಬಾರಿ ಶಾಸಕ ಆಗಿರಬಹುದು. ಆದರೆ ಕೆ.ಆರ್.ಪೇಟೆ, ಶಿರಾ ಕ್ಷೇತ್ರದಲ್ಲಿ ಗೆಲುವಿಗೆ ಶ್ರಮಿಸಿದ್ದೇನೆ. ಕಳೆದ ಬಾರಿ ವರುಣಾದಿಂದ ಸ್ಪರ್ಧೆ ಮಾಡಿದ್ದರೆ ನಿಮ್ಮ ಸಿದ್ದರಾಮಯ್ಯ ಸ್ಥಿತಿ ಏನು ಎಂಬುದನ್ನು ಯೋಚಿಸಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್ ವಿಚಾರವಾಗಿ, ಈಶ್ವರಪ್ಪ ಪ್ರಕರಣದಲ್ಲಿ ಇದೇ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದರು. ತನಿಖೆಗೆ ಎದುರಿಸಿ ಎಂದಿದ್ದರು. ಈಗ ಅವರು ಸಹ ಅದೇ ರೀತಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಆಗ್ರಹಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಎಡಗೈ ಭಂಟನಿಂದ ಸಚಿನ್ ಪಾಂಚಾಳ ಆತ್ಮಹತ್ಯೆ ಆಗಿದೆ. ಇದನ್ನು ವಿರೋಧಿಸಿ ಕಲಬುರಗಿಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಆಯೋಜನೆ ಮಾಡಿದ್ದೇವೆ. ಶಿಕಾರಿಪುರದಲ್ಲಿ ನಮ್ಮ ಮುಖಂಡರು ಮೃತಪಟ್ಟಿದ್ದರು ಹೀಗಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ನಮ್ಮ ಮುಖಂಡರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ನಮಗೆ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಸಚಿನ್ ಸಹೋದರಿ ಅವರ ಕುಟುಂಬ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಸುಪಾರಿ ಕಿಲ್ಲರ್ ಬಳಸಿಕೊಂಡು ಶಾಸಕ ಮತ್ತಿಮೋಡ್, ಹಿಂದೂ ಮುಖಂಡರ ಹತ್ಯೆಗೆ ಸಂಚು ಮಾಡಿದ್ದಾರೆ. ವಿಪಕ್ಷ ನಾಯಕರು ಬೆಳೆದರೆ ಗುಲ್ಬರ್ಗಾದಲ್ಲಿ ಇವರ ಬೇಳೆ ಬೇಯಿಸಲು ಸಾಧ್ಯವಿಲ್ಲ ಎಂದು ಹತ್ಯೆ ಮಾಡಲು ಹೊರಟಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ಸಲಹೆ ಕೊಡ್ತೇನೆ. ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ. ಸಿದ್ದರಾಮಯ್ಯ ಅವರನ್ನು ನಂಬಬೇಡಿ. ನಿಮ್ಮ ಪಕ್ಷದಲ್ಲಿ ಹಲವು ಷಡ್ಯಂತ್ರ ನಡೆಯುತ್ತಿದೆ. ನಿಮಗೆ ಸಿದ್ದರಾಮಯ್ಯ ಅವರಿಂದ ನ್ಯಾಯ ಸಿಗಲ್ಲ. ನಿಮಗೆ ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದಿದ್ದಾರೆ.ಕಾಂಗ್ರೆಸ್ ಸರ್ಕಾರ ಎರಡು ವರ್ಷದಲ್ಲಿ ಏನು ಸಾಧನೆ ಆಗಿದೆ ಎಂದು ಸಿದ್ದರಾಮಯ್ಯ ಅವರ ಮಂತ್ರಿಗಳು ಹೇಳಬೇಕು. ಎರಡು ವರ್ಷದಲ್ಲಿ ಅವರ ಸಾಧನೆ ಶೂನ್ಯ. ಈ ಅವಧಿಯಲ್ಲಿ ಯಾವೊಬ್ಬ ಶಾಸಕ ಶಂಕುಸ್ಥಾಪನೆ ಗುದ್ದಲಿ ಪೂಜೆ ಮಾಡಿಲ್ಲ. ನಾವು ಹೇಳಿದರೆ ವಿಪಕ್ಷ ಶಾಸಕರ ಟೀಕೆ ಅಂತಾರೆ. ಕಾಂಗ್ರೆಸ್ ಶಾಸಕರು ಆಡಳಿತ ಪಕ್ಷದ ಶಾಸಕರು ಆರೋಪ ಮಾಡ್ತಿದ್ದಾರೆ. ಕಾಗವಾಡ ಶಾಸಕ, ಆರ್ ವಿ ದೇಶಪಾಂಡೆ ಆರೋಪ ಮಾಡಿದ್ದಾರೆ. ಕ್ಷೇತ್ರಕ್ಕೆ ಅನುದಾನ ತರಲು ಪರದಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

3.ಬಸ್ ಪ್ರಯಾಣಿಕರಿಗೆ ಇಂದಿನಿಂದಲೇ ಶಾಕ್!, ಮಧ್ಯರಾತ್ರಿಯಿಂದಲೇ ಟಿಕೆಟ್ ದರ ಏರಿಕೆ!

ಹೊಸ ವರ್ಷದ ಆರಂಭದಿಂದಲೇ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್‌ ಆಗುತ್ತಲೇ ಇದೆ. ಇದೀಗ ಜನವರಿ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸರ್ಕಾರಿ ಬಸ್ ಟಿಕೆಟ್ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಇದೀಗ ಇಂದಿನಿಂದಲೇ ಬಸ್‌ ಪ್ರಯಾಣ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಸಾರಿಗೆ ಬಸ್‌‌ ಟಿಕೆಟ್‌ ದರ ಏರಿಕೆ ಬಗ್ಗೆ ಸರ್ಕಾರ ಸುಳಿವು ನೀಡುತ್ತಲೇ ಇತ್ತು. ಇದೀಗ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಸಾರಿಗೆ ಬಸ್‌ ಪ್ರಯಾಣ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಇನ್ನು ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿ ನಾಲ್ಕು ಸಾರಿಗೆ ಬಸ್ ಗಳ ದರ ಏರಿಕೆಯಾಗಲಿದ್ದು, ಶೇಕಡಾ 15 ರಷ್ಟು ಟಿಕೆಟ್ ದರ ಹೆಚ್ಚಳವಾಗಲಿದೆ.ಕ್ಯಾಬಿನೆಟ್ ನಲ್ಲಿ ಬಸ್ ದರ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪಿಸಿದರು. ಬಸ್ ದರ ಏರಿಕೆಗೆ ಕಾರಣಗಳು, ಸಾರಿಗೆ ನಿಗಮಗಳ ಹಣಕಾಸು ಪರಿಸ್ಥಿತಿ ಬಗ್ಗೆ ಮಾಹಿತಿ ಸಭೆಗೆ ಮಾಹಿತಿ ನೀಡಿದರು. ಸಿಎಂ ಸಿದ್ದರಾಮಯ್ಯ, ಸಚಿವರ ಮುಂದೆ ಸಾರಿಗೆ ಇಲಾಖೆ ಸ್ಥಿತಿಗತಿ ವಿವರಿಸಿದ ಸಚಿವ ರಾಮಲಿಂಗಾರೆಡ್ಡಿ. ಶಕ್ತಿ ಯೋಜನೆ, ಅದರ ಹೊರೆ ಬಗ್ಗೆಯೂ ಸಚಿವರು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದರು. ಬಿಎಂಟಿಸಿ ಬಸ್ ದರ ಏರಿಕೆ ಆಗಿ 10 ವರ್ಷ ಆಗಿದೆ. ಮೂರು ನಿಗಮಗಳ ಬಸ್ ದರ ಏರಿಕೆ‌ ಆಗಿ 5 ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ದರ ಏರಿಕೆಗೆ ಅನುಮತಿ ನೀಡಲು ತಿಳಿಸಿದರು. ಸಂಕಷ್ಟದಲ್ಲಿ ನಿಗಮಗಳು ಕಾರ್ಯನಿರ್ವಹಿಸುತ್ತಿವೆ, ಬಸ್ ದರ ಅನಿವಾರ್ಯ ಎಂದು ಕ್ಯಾಬಿನೆಟ್ ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ನೀಡಿದ್ದರು. ಮೂರು ನಿಗಮಗಳಿಗೆ ಒಂದು ದರ, ಬಿಎಂಟಿಸಿಗೆ ಒಂದು ದರ ಏರಿಕೆಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಸ್ತಾಪಿಸಿದರು. ಆರಂಭದಲ್ಲಿ 13 ರಿಂದ 18 ರಷ್ಟು ದರ ಏರಿಕೆಗೆ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಶೇ. 15 ರಷ್ಟು ಬಸ್ ದರ ಏರಿಕೆಗೆ ಸಂಪುಟ ಅನುಮತಿ ನೀಡಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2025 ರ ಮೊದಲ ಕ್ಯಾಬಿನೆಟ್ ಮೀಟಿಂಗ್ ಜನವರಿ 2ರಂದು ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚರ್ಚೆ ನಡೆಸಿದ್ದರು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಸಿದ್ದರು.

4. ಪ್ಲೀಸ್.. ಕ್ರಮ ತೆಗೆದುಕೊಳ್ಳಿ.ಯತ್ನಾಳ್ ವಿರುದ್ಧ ನಡ್ಡಾಗೆ ದೂರು

ಸರ್ಕಾರಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರೆಬೆಲ್ ಟೀಂ ಭೇಟಿಗೆ ನಿರಾಕರಿಸಿದ್ದಾರೆ. ಇದು ಯತ್ನಾಳ್ ತಂಡದ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ, ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಜತೆಗೆ ಮಾತ್ರ ಗುರುವಾರ ಮಧ್ಯ ರಾತ್ರಿಯವರೆಗೂ ಚರ್ಚೆ ನಡೆಸಿದ್ದು, ಭಿನ್ನಮತ ಚಟುವಟಿಕೆ ವಿರುದ್ಧ ವಿಜಯೇಂದ್ರ ಖಡಕ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

5. ಬ್ರೇಕಿಂಗ್ ನ್ಯೂಸ್ ಗೆ ಬ್ರೇಕ್, ಅಧ್ಯಕ್ಷರು, ಮಿನಿಸ್ಟರ್ ಗಳು ನಿರಾಳ

ಬೆಳಗಾವಿಯ ಕಾಂಗ್ರೆಸ್‌ ಮಹಾಧಿವೇಶನ ಮುಗಿದಿದೆ. ಸದ್ಯ ಒಂದು ಬಣ ‘ಫ್ಲೈಟ್‌ ಮೂಡ್‌’ನಲ್ಲಿ ಇರುವಾಗಲೇ ಮತ್ತೂಂದು ಬಣ ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ತಲುಪಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿ ಒಂದು ದಿನದ ಹಿಂದಷ್ಟೇ ನಡೆದ ಹೊಸ ವರ್ಷಾಚರಣೆಯ ಔತಣಕೂಟ. ಆದರೂ ಇನ್ನು ಮೂರು ತಿಂಗಳ ಕಾಲ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಇಲ್ಲ ಅಂತ ಹೇಳಲಾಗುತ್ತಿದೆ.

 

6.ಚೀನಾದಲ್ಲಿ ಹೊಸ ವೈರಸ್ ಆತಂಕ ,ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

ಕೊರೊನಾ ಹೆಮ್ಮಾರಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ವೈರಸ್​ನ ಅಟ್ಟಹಾಸ ಇನ್ನೂ ಮಾಸಿಲ್ಲ. ಹೀಗಿರುವಾಗಲೇ ಮತ್ತೊಂದು ಹೆಮ್ಮಾರಿ ಲಗ್ಗೆ ಇಟ್ಟಿದೆ. ಚೀನಾದಲ್ಲಿ ಇದೀಗ ಹೊಸ ವೈರಸ್ ಮತ್ತೆ ಪತ್ತೆಯಾಗಿದ್ದು, ಎಲ್ಲರೂ ಶಾಕ್​ ಆಗುವಂತೆ ಮಾಡಿದೆ. ನೆರೆಯ ಚೀನಾ ದೇಶದಲ್ಲಿ ಹೊಸ ವೈರಸ್ ಆತಂಕ ಬೆನ್ನಲ್ಲೇ ಸದ್ಯ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಐಎಲ್​ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್‌ ಮಾಡುವಂತೆ ಸಲಹೆ ನೀಡಿದೆ. ಚೀನಾ ದೇಶದಲ್ಲಿ ಹೊಸ ವೈರಸ್ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮಾಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಪ್ರತಿಕ್ರಿಯಿಸಿದ್ದು, ಐಎಲ್​ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್‌ ಮಾಡುವಂತೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಕೇಂದ್ರಸರ್ಕಾರ ಸೂಚನೆ ನೀಡಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಸೀಸನ್‌ನಲ್ಲಿ ವೈರಸ್ ಹೆಚ್ಚಾಗಿ ಬರುತ್ತದೆ. ವೈರಸ್ ಹೆಚ್ಚಾಗುವುದರಿಂದ ಉಸಿರಾಟದ ಸಮಸ್ಯೆ ಆಗುತ್ತೆ. ಜ್ವರ, ಕೆಮ್ಮಿನಿಂದ ಬಳಲುವವರು ಮಾಸ್ಕ್ ಹಾಕುವಂತೆ ಸಲಹೆ ನೀಡಿದ್ದಾರೆ.ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಡಾ.ಅತುಲ್ ಗೋಯೆಲ್ ಮಾತನಾಡಿದ್ದು, ಮೆಟಾಪ್ನ್ಯೂಮೋವೈರಸ್ ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್. ತುಂಬಾ ವಯಸ್ಸಾದ ಮತ್ತು ಚಿಕ್ಕವರಲ್ಲಿ ಜ್ವರ ಬರಬಹುದು. ಹೊಸ ವೈರಸ್ ಬಗ್ಗೆ ಗಾಬರಿಬೀಳುವ ಅಗತ್ಯವೇನು ಇಲ್ಲ ಅಂತ ಹೇಳಿದ್ದಾರೆ. ದೇಶದಲ್ಲಿ ಉಸಿರಾಟದ ಸಮಸ್ಯೆಯ ರೋಗಿಗಳ ಡೇಟಾ ವಿಶ್ಲೇಷಿಸಿದ್ದೇವೆ. 2024ರ ಡೇಟಾದಲ್ಲಿ ಅಂತಹ ಗಣನೀಯ ಹೆಚ್ಚಳವಿಲ್ಲ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಹೆಚ್ಚಾದರೆ. ನಮ್ಮ ಆಸ್ಪತ್ರೆಗಳು ಅಗತ್ಯವಿರುವ ಹಾಸಿಗೆಗಳೊಂದಿಗೆ ಸಂಪೂರ್ಣ ಸಿದ್ಧವಾಗಿವೆ. ಸಾಮಾನ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ. ಕೆಮ್ಮು, ನೆಗಡಿ ಇರೋರು ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ತಡೆಯಬೇಕು. ಶೀತ ಮತ್ತು ಜ್ವರಕ್ಕೆ ಶಿಫಾರಸು ಮಾಡಲಾದ ಸಾಮಾನ್ಯ ಔಷಧಿ ತೆಗೆದುಕೊಳ್ಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಾಬರಿಪಡಬೇಕಾಗಿಲ್ಲ ಎಂದಿದ್ದಾರೆ.

7. ದೆಹಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ , 29 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌, ಆಪ್ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 29 ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಕಾಲ್ಕಾಜಿಯಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಹಿರಿಯ ನಾಯಕ ರಮೇಶ್ ಬಿಧುರಿ, ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಪರ್ವೇಶ ವರ್ಮಾ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ತನ್ನ ಗಾಂಧಿನಗರ ಶಾಸಕ ಅನಿಲ್ ಬಾಜ್‌ಪೇಯ್ ಅವರನ್ನು ಕೈಬಿಟ್ಟು ದೆಹಲಿಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿಗೆ ಟಿಕೆಟ್ ನೀಡಿದೆ. ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 2003 ರಿಂದ 2013ರ ವರೆಗೆ ಸಚಿವರಾಗಿದ್ದ ಲವ್ಲಿ ಕಳೆದ ವರ್ಷ ಬಿಜೆಪಿ ಸೇರಿದ್ದರು. ಮತ್ತೋರ್ವ ದೆಹಲಿಯ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕರಾಗಿದ್ದ ರಾಜ್‌ಕುಮಾರ್ ಚೌಹಾಣ್ ಅವರಿಗೆ ಬಿಜೆಪಿ ಮಂಗೋಲ್‌ಪುರಿಯಿಂದ ಟಿಕೆಟ್ ನೀಡಲಾಗಿದೆ. ಎಎಪಿ ಮಾಜಿ ಸಚಿವ, ಕೇಜ್ರಿವಾಲ್ ಆಪ್ತರಾಗಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಯಿಂದ ನಜಾಫ್‌ಗಢ್ ಬದಲಿಗೆ ಬಿಜ್ವಾಸನ್‌ನಿಂದ ಕಣಕ್ಕಿಳಿದಿದ್ದರೆ, ರಾಜ್ ಕುಮಾರ್ ಆನಂದ್ ಪಟೇಲ್ ನಗರದಿಂದ ಟಿಕೆಟ್ ಪಡೆದಿದ್ದಾರೆ. ಎಎಪಿಯಿಂದ ಬಿಜೆಪಿಗೆ ತೆರಳಿದ್ದ ಶಾಸಕ ಕರ್ತಾರ್ ಸಿಂಗ್ ತನ್ವಾರ್ ಅವರ ಛತ್ತರ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ವಿಪಕ್ಷದ ನಾಯಕ ವಿಜೇಂದರ್ ಗುಪ್ತಾ, ಓಂ ಪ್ರಕಾಶ್ ಶರ್ಮಾ, ಅಜಯ್ ಮಹಾವರ್ ಮತ್ತು ಜಿತೇಂದರ್ ಮಹಾಜನ್ ಸೇರಿದಂತೆ ಬಿಜೆಪಿಯ ಹಾಲಿ ಶಾಸಕರು ಕ್ರಮವಾಗಿ ರೋಹಿಣಿ, ವಿಶ್ವಾಸ್ ನಗರ, ಘೋಂಡಾ ಮತ್ತು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮಾಳವೀಯಾ ನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಮನೋಜ್ ಶೋಕೀನ್ ನಂಗ್ಲೋಯ್ ಜಾಟ್‌ನಿಂದ ಕಣಕ್ಕಿಳಿದಿದ್ದಾರೆ.ಎಎಪಿ ಈಗಾಗಲೇ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಇದುವರೆಗೆ 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ‌.

8. ಟೆಕ್ಕಿ ಅತುಲ್ ಸುಭಾಷ್ ಪತ್ನಿಗೆ ಬಿಗ್ ರಿಲೀಫ್‌, ಮೂವರಿಗೂ ಕೋರ್ಟ್‌ ಜಾಮೀನು ಮಂಜೂರು

ಪತ್ನಿ ಕಿರುಕುಳದ ಆರೋಪ ಹೊರಿಸಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ನಿಖಿತಾ ಸೇರಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.ಟೆಕ್ಕಿ ಅತುಲ್ ಸುಭಾಷ್ ಕೇಸ್‌ನಲ್ಲಿ ನಿಖಿತಾ ಸಿಂಘಾನಿಯಾ, ನಿಶಾ ಸಿಂಘಾನಿಯಾ ಹಾಗೂ ಅನುರಾಗ್ ಸಿಂಘಾನಿಯಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.ಬೆಂಗಳೂರಿನ 29ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಿಲ್ಲ ಅನ್ನೋ ಕಾರಣಕ್ಕೆ ಕೋರ್ಟ್‌ ಮೂವರಿಗೂ ಜಾಮೀನು ಮಂಜೂರು ಮಾಡಿದೆ.ಆರೋಪಿಗಳಿಗೆ ಜಾಮೀನು ನೀಡದಂತೆ ಎಸ್‌ಪಿಪಿ ವಾದ ಮಂಡಿಸಿದರು. ಸತತ 5 ವರ್ಷಗಳಿಂದ ಟೆಕ್ಕಿ ಅತುಲ್‌ ಸುಭಾಷ್‌ಗೆ ಕಿರುಕುಳ ನೀಡಲಾಗಿದೆ. ಬೆಂಗಳೂರಲ್ಲಿ ವಾಸವಿದ್ದರೂ ಉತ್ತರ ಪ್ರದೇಶದಲ್ಲಿ ಕೇಸ್‌ಗಳನ್ನ ದಾಖಲಿಸಲಾಗಿದೆ. ಕೇಸ್ ಮೇಲೆ ಕೇಸ್ ಹಾಕಿ ಅತುಲ್‌ಗೆ ಟಾರ್ಚರ್ ನೀಡಲಾಗಿದೆ. ಹೆಂಡತಿ ಹಾಗೂ ಅವರ ಮನೆಯವರ ಟಾರ್ಚರ್ ತಡೆಯದೇ ಅತುಲ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು.ಅಷ್ಟೇ ಅಲ್ಲದೇ ಆರೋಪಿಗಳಿಗೆ ಜಾಮೀನು ಸಿಕ್ಕಲ್ಲಿ ಮತ್ತೆ ಅವರು ತನಿಖೆಗೆ ಸಿಗುವುದಿಲ್ಲ. ಅತುಲ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿದ್ದರಿಂದ ಆರೋಪಿಗಳು ಸಿಕ್ಕಿದ್ದಾರೆ. ಇಲ್ಲದೇ ಇದ್ದಲ್ಲಿ ಆರೋಪಿಗಳು ಪೊಲೀಸರಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್‌ಪಿಪಿ ಮನವಿ ಮಾಡಿದ್ದರು.

9. ದರ್ಶನ್‍ ಬೆನ್ನುನೋವಿಗೆ ಆಪರೇಷನ್ ಫಿಕ್ಸ್ , ಒಂದೂವರೆ ತಿಂಗಳು ಫೈಟ್ ದೃಶ್ಯ ನಟಿಸಂಗಿಲ್ಲ

ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಗೆ ಬಂದಿರುವ ನಟ ದರ್ಶನ್ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸಂಕ್ರಾಂತಿ ಹಬ್ಬದ ವೇಳೆಯ ದರ್ಶನ್‍ಗೆ ಆಪರೇಷನ್ ಫಿಕ್ಸ್ ಆಗಿದ್ದು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಆಪರೇಷನ್‍ಗೆ ಒಳಗಾಗಲಿದ್ದಾರೆ. ಅಪರೇಷನ್ ಮಾಡಿದ ಒಂದೂವರೆ ತಿಂಗಳು ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ದರ್ಶನ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಅಜಯ್ ಹೆಗ್ಡೆ ಮಾಹಿತಿ ನೀಡಿದ್ದಾರೆ. ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ಅಪರೇಷನ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆಪರೇಷನ್ ಬಳಿಕ 3 ದಿನ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ದರ್ಶನ್ ವರ್ಕೌಟ್ ಶುರು ಮಾಡಿದ್ದಾರೆ. ಆದರೆ ಅಪ್ಪರ್ ಬಾಡಿ, ಲೋಯರ್ ಬಾಡಿ ವರ್ಕೌಟ್ ಮಾಡಲು ಬಿಟ್ಟಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

About The Author