Friday, August 29, 2025

Latest Posts

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

- Advertisement -

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ ದಿನದಿಂದ ದಿನಕ್ಕೆ ಸಾಫ್ಟ್ ಆಗಿದೆ ಎಂಬ ಟೀಕೆಗಳು ರಾಜಕೀಯ ವಲಯದಲ್ಲಿ ಕೇಳಿ ಬರ್ತಾ ಇವೆ.

ಹಿಂದೆಲ್ಲಾ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತನಾಡಲು ನಿಂತರೆ ಎಲ್ಲರ ಬಾಯಿಯನ್ನು ಮುಚ್ಚಿಸುತ್ತಿದ್ದರು. ಯಾವುದೇ ವಿಚಾರವಿರಲಿ, ಅದರ ಪೂರ್ವಾವಪರವನ್ನು ಅರಿತೇ ಮಾತನಾಡುವ ಸಿದ್ದರಾಮಯ್ಯನವರು, ಎರಡನೇ ಅವಧಿಯಲ್ಲಿ ಅಷ್ಟು ರಗಡ್ ಆಗಿಲ್ಲ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.

ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರ ಈ ಧೋರಣೆಗೆ ಕಾರಣವೇನು? ಸಿಎಂ ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಸಾಫ್ಟ್ ಆಗುತ್ತಿದ್ದಾರಾ? 2013-18ರ ಅವಧಿಯಲ್ಲಿದ್ದ ಟಫ್ ಸಿದ್ದರಾಮಯ್ಯ ಸಾಫ್ಟ್ ಆಗುತ್ತಿರುವುದು ಯಾಕೆ? ಸಿಎಂ ಖದರ್ ಕಮ್ಮಿಯಾಗಲು ಕಾರಣವೇನು? ಅನ್ನೋದೆಲ್ಲವನ್ನ ನೋಡ್ತಾ ಹೋಗೋಣ

ನಂಬರ್ 1. ಮುಡಾ ಹಗರಣ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ನೇರವಾಗಿ ಸಿಎಂ ಕುಟುಂಬದ ಹೆಸರು ತಳ್ಳಲ್ಪಟ್ಟದ್ದು ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ತೀವ್ರ ಮುಜುಗರ ತಂದಿತ್ತು. ಅವರ ಪತ್ನಿ ಮತ್ತು ಪತ್ನಿಯ ಸಹೋದರರ ಹೆಸರು ಇದರಲ್ಲಿ ಉಲ್ಲೇಖವಾಗಿತ್ತು. ಏಕಾಂಗಿಯಾಗಿ ಸೈಟ್ ಹಿಂತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ, ಜಾರಿ ನಿರ್ದೇಶನಾಲಯ ಮತ್ತು ಸುಪ್ರೀಂ ಕೋರ್ಟ್ ಈ ಬಗ್ಗೆ ಕ್ಲೀನ್ ಚಿಟ್ ನೀಡಿದರೂ, ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

2. ವಾಲ್ಮೀಕಿ ನಿಗಮ ಹಗರಣ                                                                                            ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ 88 ಕೋಟಿ ರೂ. ನಿದರ್ಶನವಿಲ್ಲದ ವರ್ಗಾವಣೆ ಪ್ರಕರಣ ಸರಕಾರಕ್ಕೆ ಭಾರೀ ಮುಜುಗರ ತಂದಿತ್ತು. ಈ ಹಗರಣದಲ್ಲಿ ನೇರವಾಗಿ ಸಚಿವ ಬಿ. ನಾಗೇಂದ್ರ ಅವರ ಪಾತ್ರವಿದೆ ಎಂಬ ಶಂಕೆ ಬಂದ ಕಾರಣದಿಂದ ಅವರ ರಾಜೀನಾಮೆ ಪಡೆಯಲಾಯಿತು. ಈ ಪ್ರಕರಣವು ಬಿಜೆಪಿ, ರಾಷ್ಟ್ರಮಟ್ಟದಲ್ಲಿ ಪ್ರಚಾರ ಅಸ್ತ್ರವಾಗಿ ಬಳಸಿದ ಘಟನೆಗಳಲ್ಲಿ ಒಂದು.

3. ಬಹುಕೋಟಿ ಅಬಕಾರಿ ಹಗರಣ                                                                                  ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರರ ವಿರುದ್ಧ 13 ಕೋಟಿ ರೂ. ಲಂಚ ಆರೋಪ ಕೇಳಿಬಂದಿತ್ತು. ಈ ಕುರಿತು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ತೀವ್ರ ಆರೋಪ ಮಾಡಿದ್ದು, ರಾಜ್ಯಪಾಲರಿಗೂ ಈ ಕುರಿತು ದೂರು ಸಲ್ಲಿಸಲಾಯಿತು. ಆದರೆ, ಹೈಕಮಾಂಡ್ ಹೇಳಿದಂತೆ ಸಿಎಂ ಯಾವುದೇ ತೀವ್ರ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಅವರ ನಿರ್ಧಾರಗಳಲ್ಲಿ ಸ್ಫೂರ್ತಿ ಕಡಿಮೆಯಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

4. ಪವರ್ ಸೆಂಟರ್
ಎರಡನೇ ಅವಧಿಯ ಆರಂಭದಲ್ಲೇ ಸ್ಪಷ್ಟವಾಗಿ ಎರಡು ಬಣ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದ್ದದ್ದು ಸ್ಪಷ್ಟವಾಗಿತ್ತು. ಇದನ್ನೆಲ್ಲಾ ಮೀರಿ, ಆಡಳಿತ ಸುಸೂತ್ರವಾಗಿ ನಡೆಯುತ್ತಾ ಹೋದರೂ, ಎರಡು ಇದ್ದದ್ದು ಮೂರು ಪವರ್ ಸೆಂಟರ್ ರೀತಿಯಲ್ಲಿ ರಾಜಕೀಯ ವಿದ್ಯಮಾನಗಳು ನಡೆಯುತ್ತಾ ಬಂದವು. ಹಾಗಾಗಿ, ಮೊದಲ ಅವಧಿಗೆ ಇದ್ದಂತಹ ಪರಿಸ್ಥಿತಿ, ಈ ಬಾರಿ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

5. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು
ರಾಜ್ಯ ಸರ್ಕಾರದ ಖಜಾನೆಯ ಮೇಲೆ ಗ್ಯಾರಂಟಿ ಯೋಜನೆಗಳು ಭಾರೀ ಒತ್ತಡ ತಂದಿದೆ ಎಂದು ಸಿಎಜಿ ರಿಪೋರ್ಟ್ ಕೂಡಾ ಹೇಳುತ್ತಿದೆ. 2024-25ನೇ ಸಾಲಿನ ಅನೇಕ ಅಭಿವೃದ್ದಿ ಯೋಜನೆಗಳು ನಿಧಿ ಕೊರತೆಯಿಂದ ತತ್ತರಿಸುತ್ತಿವೆ. ಕೆಲ ಕಾಂಗ್ರೆಸ್ ಶಾಸಕರೇ ಗ್ಯಾರಂಟಿಯಿಂದಾಗಿ ದುಡ್ಡಿಲ್ಲ ಅಂತ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂನ ಉತ್ಸಾಹವೂ ಕ್ಷೀಣಗೊಂಡಂತಾಗಿದೆ.

6. ಹೈಕಮಾಂಡ್ ಹಿಡಿತ
ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಹೈಕಮಾಂಡ್ ಶಕ್ತಿಯು ಹೆಚ್ಚು ಪರಿಣಾಮ ಬೀರುತ್ತಿದೆ. AICC ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಕೇಂದ್ರ ನಾಯಕರು ಪ್ರತಿ ನಿರ್ಧಾರವನ್ನು ಸಮೀಕ್ಷಿಸುತ್ತಿದ್ದಾರೆ. ಹೀಗಾಗಿ, ಸಿಎಂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೈಕಮಾಂಡ್ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಏರ್ಪಟ್ಟಿದೆ.

ಭ್ರಷ್ಟಾಚಾರ ಆರೋಪಗಳಿಂದ ಮುಜುಗರ, ಆಂತರಿಕ ಭಿನ್ನಮತಗಳು, ಆರ್ಥಿಕ ಬಿಕ್ಕಟ್ಟು ಹಾಗೂ ಹೈಕಮಾಂಡ್ ದಬ್ಬಾಳಿಕೆ ಈ ಎಲ್ಲಾ ಅಂಶಗಳು ಸೇರಿ ಮುಖ್ಯಮಂತ್ರಿಯ ಧೈರ್ಯವನ್ನು ತಗ್ಗಿಸಿವೆ ಎಂಬುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest Posts

Don't Miss