Political News: ಕರ್ನಾಟಕದ ವಿದ್ಯುತ್ ವಲಯದ ವಹಿವಾಟುಗಳನ್ನು ಮತ್ತಷ್ಟು ಪಾರದರ್ಶಕ, ಹೊಣೆಗಾರಿಕೆಯುತ, ನಿಖರ ಮತ್ತು ವೇಗಗೊಳಿಸುವ ಉದ್ದೇಶದಿಂದ KPTCL-GTD (Generation, Transmission and Distribution) ಸಮಗ್ರ ಡಿಜಿಟಲ್ ವೇದಿಕೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರು KPTCL-GTD ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕಾರ್ಯಗಳನ್ನು ಆರಂಭಿಸಿದ್ದು, ಸಂಬಂಧಿತ ವಿಭಾಗಗಳು ಹಾಗೂ ಸಂಸ್ಥೆಗಳ ನಡುವಿನ ದತ್ತಾಂಶ ಮತ್ತು ಪ್ರಕ್ರಿಯೆಗಳ ಏಕೀಕರಣಕ್ಕೆ ಕ್ರಮ ಕೈಗೊಂಡಿದ್ದಾರೆ.
ವಿದ್ಯುತ್ ಉತ್ಪಾದನಾ ಸಂಸ್ಥೆಗಳು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ವಿದ್ಯುತ್ ಸರಬರಾಜು ಕಂಪನಿಗಳು (ESCOMs) ಹಾಗೂ ಇತರೆ ಸಂಬಂಧಿತ ಸಂಸ್ಥೆಗಳ ನಡುವಿನ ಪ್ರಮುಖ ವಹಿವಾಟುಗಳನ್ನು ಒಂದೇ ಕೇಂದ್ರೀಕೃತ ಡಿಜಿಟಲ್ ವೇದಿಕೆಯಲ್ಲಿ ಜೋಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈವರೆಗೆ ವಿವಿಧ ಹಂತಗಳಲ್ಲಿ ಪ್ರತ್ಯೇಕವಾಗಿ ಹಾಗೂ ಹಸ್ತಚಾಲಿತವಾಗಿ ನಡೆಯುತ್ತಿದ್ದ ವಿದ್ಯುತ್ ಖರೀದಿ–ಮಾರಾಟ, ಬಿಲ್ಲಿಂಗ್, ಇಂಧನ ಸಮನ್ವಯ, ಬ್ಯಾಂಕಿಂಗ್, ಓಪನ್ ಆಕ್ಸೆಸ್ ಮತ್ತು ಹಣಕಾಸು ಇತ್ಯರ್ಥ ಪ್ರಕ್ರಿಯೆಗಳನ್ನು ಡಿಜಿಟಲ್ ಹಾಗೂ ಸ್ವಯಂಚಾಲಿತಗೊಳಿಸಲಾಗುತ್ತದೆ.
ಇದರಿಂದ ಮಾನವ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ, ವಹಿವಾಟಿನಲ್ಲಿ *ಪಾರದರ್ಶಕತೆ, ನಿಖರತೆ, ಹೊಣೆಗಾರಿಕೆ ಹಾಗೂ ವೇಗ ಹೆಚ್ಚಲಿದೆ.
ಉತ್ಪಾದಕರಿಂದ ಖರೀದಿದಾರರವರೆಗೆ ಒಂದೇ ವ್ಯವಸ್ಥೆ
KPTCL-GTD ಮೂಲಕ ವಿದ್ಯುತ್ ಉತ್ಪಾದಕರು, ವಿದ್ಯುತ್ ಖರೀದಿದಾರರು, ಪ್ರಸರಣ ಸಂಸ್ಥೆಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಒಂದೇ ಡಿಜಿಟಲ್ ವ್ಯವಸ್ಥೆಯಡಿ ಅಗತ್ಯ ದತ್ತಾಂಶ ಮತ್ತು ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ.
ಯಾರು ಎಷ್ಟು ವಿದ್ಯುತ್ ಉತ್ಪಾದಿಸಿದ್ದಾರೆ, ಎಷ್ಟು ವಿದ್ಯುತ್ ಪ್ರಸರಣಗೊಂಡಿದೆ, ಎಷ್ಟು ಬಳಕೆಯಾಗಿದೆ ಹಾಗೂ ಅದಕ್ಕೆ ಸಂಬಂಧಿಸಿದ ಬಿಲ್ಲಿಂಗ್ ಮತ್ತು ಹಣಕಾಸು ಇತ್ಯರ್ಥದ ಸ್ಥಿತಿ ಏನು ಎಂಬ ಮಾಹಿತಿಯನ್ನು ಹೆಚ್ಚು ನಿಖರವಾಗಿ ನಿರ್ವಹಿಸಲು Energy Reconciliation ವ್ಯವಸ್ಥೆ ನೆರವಾಗಲಿದೆ.
ಮೀಟರ್ಗಳಿಂದ ನೇರವಾಗಿ ದತ್ತಾಂಶ ಪಡೆಯುವ Meter Reading Interface (MRI), 15 ನಿಮಿಷಗಳ ಬ್ಲಾಕ್ ಮಟ್ಟದ ದತ್ತಾಂಶ ಹಾಗೂ ಇಂಟರ್ಫೇಸ್ ಪಾಯಿಂಟ್ ಮಾಹಿತಿಯನ್ನು ವ್ಯವಸ್ಥೆಯೊಂದಿಗೆ ಜೋಡಿಸುವ ಮೂಲಕ ಹಸ್ತಚಾಲಿತ ದತ್ತಾಂಶ ನಮೂದು ಮತ್ತು ಲೆಕ್ಕಾಚಾರದ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತದೆ.
ರಿಯಲ್ಟೈಮ್ ಮಾಹಿತಿ, ವೇಗದ ಇತ್ಯರ್ಥ
ಸುಧಾರಿತ ತಂತ್ರಜ್ಞಾನ ಮತ್ತು ಡ್ಯಾಶ್ಬೋರ್ಡ್ ವ್ಯವಸ್ಥೆಯ ಮೂಲಕ ವಿದ್ಯುತ್ ವಹಿವಾಟು, ಬಿಲ್ಲಿಂಗ್, ಇಂಧನ ಸಮನ್ವಯ ಹಾಗೂ ಹಣಕಾಸು ಇತ್ಯರ್ಥಕ್ಕೆ ಸಂಬಂಧಿಸಿದ ಮಾಹಿತಿಯನ್ನು ರಿಯಲ್ಟೈಮ್ನಲ್ಲಿ ವೀಕ್ಷಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಇದರಿಂದ ಬಿಲ್ಲಿಂಗ್ ವ್ಯತ್ಯಾಸಗಳು, ಲೆಕ್ಕಪತ್ರ ಹೊಂದಾಣಿಕೆಯ ವಿಳಂಬ ಹಾಗೂ ದತ್ತಾಂಶದಲ್ಲಿನ ಅಸಂಗತತೆಗಳನ್ನು ಕಡಿಮೆ ಮಾಡಿ, ವಹಿವಾಟು ಮತ್ತು ಹಣಕಾಸು ಇತ್ಯರ್ಥವನ್ನು ಮತ್ತಷ್ಟು ತ್ವರಿತಗೊಳಿಸಲು ಸಾಧ್ಯವಾಗಲಿದೆ.
ಕೇಂದ್ರ ಸರ್ಕಾರದ PRAAPTI Portal, NOAR Portal ಸೇರಿದಂತೆ ಸಂಬಂಧಿತ ಡಿಜಿಟಲ್ ವ್ಯವಸ್ಥೆಗಳೊಂದಿಗೆ ಅಗತ್ಯ ಏಕೀಕರಣ ಕಲ್ಪಿಸಲಾಗುತ್ತಿದ್ದು, ವಿವಿಧ ಸಂಸ್ಥೆಗಳ ನಡುವಿನ ದತ್ತಾಂಶ ಹರಿವು ಮತ್ತು ವಹಿವಾಟು ಮತ್ತಷ್ಟು ಸುಗಮವಾಗಲಿದೆ.
ಬಿಲ್ಲುಗಳು ಮತ್ತು ಸಂಬಂಧಿತ ದಾಖಲೆಗಳಿಗೆ ಡಿಜಿಟಲ್ ಸಹಿ ಹಾಗೂ ಡಿಜಿಟಲ್ ಅನುಮೋದನೆ ವ್ಯವಸ್ಥೆ ಅಳವಡಿಸುವ ಮೂಲಕ ಕಾಗದ ಆಧಾರಿತ ಹಾಗೂ ಹಸ್ತಚಾಲಿತ ಪ್ರಕ್ರಿಯೆಗಳನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.
ದಕ್ಷತೆ ಹೆಚ್ಚಳ, ನಷ್ಟ ನಿಯಂತ್ರಣ
ನಿಖರ ಇಂಧನ ಲೆಕ್ಕಾಚಾರ, ಸ್ವಯಂಚಾಲಿತ ಬಿಲ್ಲಿಂಗ್, ತ್ವರಿತ ಹಣಕಾಸು ಇತ್ಯರ್ಥ ಹಾಗೂ ರಿಯಲ್ಟೈಮ್ ಮೇಲ್ವಿಚಾರಣೆಯಿಂದ ವಿದ್ಯುತ್ ವಲಯದ ಒಟ್ಟಾರೆ ಕಾರ್ಯದಕ್ಷತೆಯನ್ನು ಹೆಚ್ಚಿಸಲು, ಪ್ರಕ್ರಿಯಾತ್ಮಕ ಮತ್ತು ವಾಣಿಜ್ಯ ನಷ್ಟಗಳನ್ನು ಕಡಿಮೆ ಮಾಡಲು ಹಾಗೂ ಆದಾಯ ಸಂಗ್ರಹಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು KPTCL-GTD ನೆರವಾಗಲಿದೆ.
ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ಮಾತನಾಡಿ, “ವಿದ್ಯುತ್ ವಲಯದಲ್ಲಿ ಉತ್ಪಾದನೆಯಿಂದ ವಿತರಣೆಯವರೆಗೆ ಅನೇಕ ಸಂಸ್ಥೆಗಳು ಮತ್ತು ಹಂತಗಳು ಕಾರ್ಯನಿರ್ವಹಿಸುತ್ತವೆ. ಈವರೆಗೆ ಪ್ರತ್ಯೇಕವಾಗಿ ಮತ್ತು ಹಸ್ತಚಾಲಿತವಾಗಿ ನಡೆಯುತ್ತಿದ್ದ ಪ್ರಮುಖ ಪ್ರಕ್ರಿಯೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒಂದೇ ಡಿಜಿಟಲ್ ವೇದಿಕೆಯಲ್ಲಿ ಜೋಡಿಸುವುದು ನಮ್ಮ ಉದ್ದೇಶ. ಇದರಿಂದ ವಿದ್ಯುತ್ ಉತ್ಪಾದಕರು, ಖರೀದಿದಾರರು, ಪ್ರಸರಣ ಮತ್ತು ವಿತರಣಾ ಸಂಸ್ಥೆಗಳು ಸೇರಿದಂತೆ ಎಲ್ಲ ಪಾಲುದಾರರಿಗೆ ವಹಿವಾಟು ಮತ್ತಷ್ಟು ಪಾರದರ್ಶಕ, ವೇಗವಾದ ಮತ್ತು ಸುಗಮವಾಗಲಿದೆ,” ಎಂದು ಹೇಳಿದರು.
“ತಂತ್ರಜ್ಞಾನ ಅಳವಡಿಕೆ ಕೇವಲ ಡಿಜಿಟಲೀಕರಣಕ್ಕೆ ಸೀಮಿತವಾಗಬಾರದು. ಅದು ಇಲಾಖೆಯ ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕು, ನಷ್ಟಗಳನ್ನು ಕಡಿಮೆ ಮಾಡಬೇಕು, ಹಣಕಾಸು ನಿರ್ವಹಣೆಯನ್ನು ಬಲಪಡಿಸಬೇಕು ಹಾಗೂ ಆದಾಯ ಸಂಗ್ರಹಣೆಯನ್ನು ಸುಧಾರಿಸಬೇಕು. ಈ ದೃಷ್ಟಿಯಿಂದ KPTCL-GTD ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ,” ಎಂದು ಸಚಿವರು ತಿಳಿಸಿದರು.
ಸಚಿವರ ನಿರ್ದೇಶನದಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರ ನೇತೃತ್ವದಲ್ಲಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಆರಂಭಗೊಂಡಿದ್ದು, ವಿವಿಧ ಸಂಸ್ಥೆಗಳ ದತ್ತಾಂಶ, ಬಿಲ್ಲಿಂಗ್, Energy Reconciliation, ಡಿಜಿಟಲ್ ಅನುಮೋದನೆ ಹಾಗೂ ಹಣಕಾಸು ಇತ್ಯರ್ಥ ವ್ಯವಸ್ಥೆಗಳನ್ನು ಹಂತ ಹಂತವಾಗಿ ಏಕೀಕರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
KPTCL-GTD ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ಬಳಿಕ, ವಿದ್ಯುತ್ ಉತ್ಪಾದನೆಯಿಂದ ವಿತರಣೆಯವರೆಗೆ ದತ್ತಾಂಶ, ಇಂಧನ ಲೆಕ್ಕಾಚಾರ, ಬಿಲ್ಲಿಂಗ್ ಮತ್ತು ಹಣಕಾಸು ವಹಿವಾಟುಗಳನ್ನು ಒಂದೇ ಡಿಜಿಟಲ್ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ, ನಿಖರವಾಗಿ ಮತ್ತು ವೇಗವಾಗಿ ನಿರ್ವಹಿಸುವ ಸಮಗ್ರ ವ್ಯವಸ್ಥೆ ರಾಜ್ಯದಲ್ಲಿ ರೂಪುಗೊಳ್ಳಲಿದೆ.




