ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯ ವಿಚಾರದಲ್ಲಿ ಜಾಗತಿಕ ಮಟ್ಟದ ನಾಯಕರು ಭಾರತಕ್ಕೆ ಬೆಂಬಲ ನೀಡುತ್ತಿದ್ದಾರೆ. ವಿಶ್ವದ ಹಲವು ದಿಗ್ಗಜ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇಸ್ರೇಲ್ ಅಂತೂ ಖುದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಬಹಿರಂಗವಾಗಿ ಭಾರತದ ಬೆನ್ನಿಗೆ ನಿಂತಿದೆ. ಇದರ ನಡುವೆಯೇ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕ ಮಾತ್ರ ಕೇವಲ ಒಂದು ಸಾಂತ್ವನ ಸಂದೇಶ ಕಳುಹಿಸಿ, ಬೆಂಬಲ ಇದೆ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟಿತ್ತು. ಆದರೆ ಇದೀಗ ಇದೇ ವಿಚಾರಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ.
ರೋಮ್‌ಗೆ ತೆರಳುವ ಮಾರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಅದು ಆ ಎರಡೂ ದೇಶಗಳ ನಡುವಿನ ಹಲವು ದಶಕಗಳ ಸಮಸ್ಯೆ ಎಂದು ತಮ್ಮ ಅಸಹಾಕತೆ ತೋರಿಸಿದ್ದಾರೆ. ಪಾಕಿಸ್ತಾನ ಹಾಗೂ ಭಾರತದ ನಡುವಿನ ಈ ಉದ್ವಿಗ್ನ ಪರಿಸ್ಥಿತಿಯು ತಂಬಾ ಹಳೆಯ ವಿಚಾರವಾಗಿದೆ. ಅದು ಈಗಲೂ ಹಾಗೆಯೇ ಮುಂದುವರೆದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದನ್ನು ಹೇಗಾದರೂ ಒಂದಲ್ಲ ಒಂದು ರೀತಿಯಲ್ಲಿ ಪರಿಹರಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ನಿಗೂಢವಾದ ಹೇಳಿಕೆಯನ್ನು ನೀಡಿದ್ದಾರೆ.
ನಾನು ಇಬ್ಬರಿಗೂ ಸಮೀಪದವನಾಗಿದ್ದೇನೆ..!
ಇನ್ನೂ ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ 26 ಜನ ಪ್ರಾಣ ಕಳೆದುಕೊಂಡ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನತೆ ಬಗ್ಗೆ ತಾವು ಎರಡು ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆಗೆ ಮುಂದಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ನಾನು ಭಾರತಕ್ಕೂ ಹಾಗೂ ಪಾಕಿಸ್ತಾನಕ್ಕೂ ಬಹಳ ಸಮೀಪದವನಾಗಿದ್ದೇನೆ, ಕಾಶ್ಮೀರಕ್ಕಾಗಿ ಆ ದೇಶಗಳ ನಡುವಿನ ಹೋರಾಟ ಮುಂದುವರೆಯುತ್ತಿದೆ. ಇನ್ನೂ ಹೀಗೆ ಅದು ಸಾವಿರ ವರ್ಷಗಳಷ್ಟು ಅದು ನಡೆಯಬಹುದು, ಇಲ್ಲವಾದರೆ ಅದಕ್ಕೂ ಹೆಚ್ಚು ಅವಧಿ ಅದು ಹಾಗೆ ಮುಂದುವರೆಯಬಹುದಾಗಿದೆ. ಆದರೆ ಇತ್ತೀಚಿಗೆ ನಡೆದ ದಾಳಿಯು ತೀರ ಭೀಕರವಾಗಿತ್ತು. ಯಾಕೆಂದರೆ ಎರಡೂ ದೇಶಗಳ ನಾಯಕರು ನನಗೆ ಗೊತ್ತಿದ್ದಾರೆ ಎನ್ನುವ ಮೂಲಕ ಅವರು ತಮ್ಮ ಮುಂದಿನ ನಡೆಯನ್ನು ಬಿಟ್ಟುಕೊಡಲಿಲ್ಲ.
ಸತ್ಯ ಒಪ್ಪಿಕೊಂಡೀತೆ ಅಮೆರಿಕ..?
ನಾವಿಲ್ಲಿ ಸೂಕ್ಷ್ಮವಾಗಿ ಈ ಟ್ರಂಪ್ ಹೇಳಿಕೆಯನ್ನು ಅವಲೋಕಿಸಿದಾಗ, ಅಮೆರಿಕ ಉಗ್ರವಾದವನ್ನು ನಿರ್ಮೂಲನೆ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಯಾಕೆಂದರೆ ರಷ್ಯಾ – ಉಕ್ರೇನ್ ನಡುವಿನ ಯುಧ್ಧವನ್ನು ತಡೆಯುವ ಮನಸ್ಸು ಮಾಡಿದ್ದ ಟ್ರಂಪ್, ಈ ಎರಡು ದೇಶಗಳ ವಿಚಾರದಲ್ಲಿ ಕನಿಷ್ಠ ಪಕ್ಷ ಒಂದು ಸಲಹೆಯನ್ನಾದರೂ ನೀಡಬೇಕಿತ್ತು. ಆದರೆ ಅದನ್ನು ಮಾಡದೇ ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿರುವಂತೆ ಅಮೆರಿಕ ಪರೋಕ್ಷವಾಗಿ ಉಗ್ರವಾದವನ್ನು ಬೆಂಬಲಿಸುವುದಾಗಿ ಒಪ್ಪಿಕೊಂಡಂತಾಗಿದೆ.
ಭಾರತ ಎಚ್ಚರಿಕೆ ಹೆಜ್ಜೆ ಇಡಬೇಕಿದೆ..!
ಇನ್ನೂ ಅಮೆರಿಕಕ್ಕಾಗಿಯೇ ನಾವು ಈ ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿರುವ ಆಸಿಫ್ ಮಾತು ಈ ಮೂಲಕ ಸತ್ಯವಾದಂತಾಗಿದೆ. ಹೀಗಾಗಿ ಅಮೆರಿಕದ ವಿಚಾರದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಟ್ರಂಪ್ ಅಷ್ಟೊಂದು ಆತ್ಮ ವಿಶ್ವಾಸದಿಂದ ಈ ವಿವಾದ ಇನ್ನೂ ಸಾವಿರ ವರ್ಷಗಳಷ್ಟು ಮುಂದುವರೆಯುತ್ತದೆ ಎಂದು ಹೇಳಲು ಹೇಗೆ ಸಾಧ್ಯ..? ಹಾಗಾದರೆ ಇವರೇ ಪಾಕಿಗಳನ್ನು ಭಯೋತ್ಪಾದಕತೆಗೆ ಉತ್ತೇಜನ ನೀಡುತ್ತಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕಳೆದ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ದಾಳಿ ಮಾಡಿ ಪ್ರವಾಸಿಗರ ಮಾರಣ ಹೋಮ ನಡೆಸಿದ್ದರು. ಇದರ ಹೊಣೆಯನ್ನು ಪಾಕಿಸ್ತಾನದ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಟಿಆರ್‌ಎಫ್ ಸಂಘಟನೆ ಹೊತ್ತು ಕೊಂಡಿತ್ತು. ಬಳಿಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಪಾಕ್ ಜೊತೆಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸುವ ನಿರ್ಧಾರ ಮಾಡಿತ್ತು. ಪ್ರಮುಖವಾಗಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿ ಭಾರತ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ನೀಡಿತ್ತು. ಇದರಿಂದ ಕಂಗಾಲಾದ ಪಾಕಿಗಳು ಭಾರತದ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ.