Tumakuru: ಎರಡು ಓಮಿನಿಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ: 10 ಮಂದಿಗೆ ಗಂಭೀರ ಗಾಯ

Tumakuru: ಚಿಕ್ಕನಾಯಕನಹಳ್ಳಿ: ಪಟ್ಟಣದ ಹೊರವಲಯದ ಆಲದ ಕಟ್ಟೆ ಸಮೀಪ ಎರಡು ಓಮಿನಿಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ 10ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.

ಗಾರ್ಮೆಂಟ್ಸ್ ಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಓಮಿನಿ ಹಾಗೂ ಎದುರಿನಿಂದ ಬರುತ್ತಿದ್ದ ಮತ್ತೊಂದು ಓಮಿನಿ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು. ಗಾಯಗೊಂಡವರಲ್ಲಿ ಹೆಚ್ಚಿನವರು ತಾಲೂಕಿನ ಬೆಳಗುಲಿ ರಂಗಾಪುರದವರು ಎಂದು ತಿಳಿದು ಬಂದಿದೆ

ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿ ತಕ್ಷಣವೇ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಐದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಮಾಹಿತಿ ಪಡೆದ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಬೇಕಿದ್ದು, ರಸ್ತೆ ಸುರಕ್ಷತೆ ಹಾಗೂ ವಾಹನಗಳ ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

About The Author