Tumakuru: ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ದುಷ್ಕರ್ಮಿಗಳು ಬಾಂಬ್ ಸ್ಪೋಟದ ಬೆದರಿಕೆಯ ಸಂದೇಶ ರವಾನಿಸಿದ ಘಟನೆ ನಡೆದಿದೆ.
ಈ-ಮೇಲ್ ಮೂಲಕ ಸಂದೇಶ ರವಾನೆ ಮಾಡಲಾಗಿದ್ದು, ಇಂದು ಮುಂಜಾನೆ ಬೆಳಗ್ಗೆ 6.59 ಕ್ಕೆ ಮೇಲ್ ತಲುಪಿದೆ. ಈ ಮೇಲ್ ಕಂಡ ಕೂಡಲೇ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಕೂಡಲೇ ಪೊಲೀಸರು ಜಿಲ್ಲಾಧಿಕಾರಿಗಳ ಕೊಠಡಿ, ಆಪ್ತ ಸಹಾಯಕರ ಕಚೇರಿ ಸೇರಿದಂತೆ ಎಲ್ಲವನ್ನೂ ಸಂಪೂರ್ಣ ಪರಿಶೀಲನೆಗೆ ಒಳಪಡಿಸಿದ್ದಾರೆ.
ತುಮಕೂರು ಸಬ್ ಡಿವಿಷನ್ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿಯೊಂಡನೆ ಇಡೀ ಕಚೇರಿಯನ್ನು ಪರಿಶೀಲನೆಗೊಳಪಡಿಸಲಾಗಿದೆ.
ಸ್ಥಳದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಿಬ್ಬಂಧಿಯನ್ನ ಒಬ್ಬೊಬ್ಬರನ್ನಾಗಿ ಪರೀಕ್ಷಿಸಿ ಕಚೇರಿಯೊಳಗೆ ಬಿಡಲಾಗುತ್ತಿದೆ. ಇಂದು ಮಧ್ಯಾಹ್ನದವರೆಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಬಿಡದಂತೆ ನಿರ್ಬಂಧಿಸಲಾಗಿದೆ. ಈ ಮಧ್ಯೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದಂತಹ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಭೂ ಸ್ವಾಧೀನ ಸಭೆಯನ್ನೂ ಕೂಡ ರದ್ದು ಮಾಡಲಾಗಿದೆ.
ಇನ್ನು, ನಗರದ ಡಿವೈಎಸ್‌ಪಿ ಚಂದ್ರಶೇಖರ್, ಇನ್ಸ್ ಪೆಕ್ಟರ್ ಅವಿನಾಶ್, ಸಬ್ ಇನ್ಸ್‌ಪೆಕ್ಟರ್ ಚೇತನ್ ಮತ್ತು ತಂಡದಿಂದ ಪರಿಶೀಲನಾ ಕಾರ್ಯ ಮುಂದುವರೆದಿದೆ.



