Tumakuru: ತುಮಕೂರು: ಪತಿ ವಿದೇಶಕ್ಕೆ ಹೋಗಿ, ಮರಳಿ ಬಂದ ಬಳಿಕ ಪತ್ನಿ ಕಿರುಕುಳ ನೀಡಿದ್ದಾಳೆಂದು ಆರೋಪಿಸಿ ವ್ಯಕ್ತಿಯೋರ್ವ ಲೈವ್ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕಳೆದ 4 ವರ್ಷದ ಹಿಂದೆ ಈತ ಸೈಯದ್ ನಿಕತ್ ಫಿರ್ದೋಸ್ ಎಂಬಾಕೆ ಜತೆ ವಿವಾಹವಾಗಿದ್ದ. 2 ವರ್ಷ ಜೀವನ ಚೆನ್ನಾಗಿಯೇ ಇತ್ತು. ಆದರೆ 2ನೇ ಮಗುವಿಗೆ ನಿಖತ್ ತಾಯಿಯಾದಾಗ, ಸಲ್ಮಾನ್ ಕುವೈತ್‌ಗೆ ಕೆಲಸಕ್ಕೆ ಹೋದ. ಹಾಗಾಗಿ ನಿಖತ್ ತಾಯಿ ಮನೆ ಸೇರಿದಳು.
ಅದಾದ ಬಳಿಕ ಪ್ರತಿದಿನ ಕರೆಯಲ್ಲಿ ನಿಖತ್ ಮತ್ತು ಆಕೆಯ ಸಂಬಂಧಿಕರು ಸಲ್ಮಾನ್ ಜತೆ ಜಗಳವಾಡುತ್ತಿದ್ದರೆಂದು ಆರೋಪಿಸಲಾಗಿದೆ. ಇದಕ್ಕೆ ಕಾರಣ ಹಣ. ವಿದೇಶದಲ್ಲಿ ಕೆಲಸ ಮಾಡಿ ದುಡಿದ ಹಣದಲ್ಲಿ ತನಗೆ ಸಾಧ್ಯವಾದಷ್ಟು ಹಣ ಕಳುಹಿಸುತ್ತಿದ್ದ. ಆದರೆ ನಿಖತ್‌ಗೆ ಅದು ಸಾಕಾಗುತ್ತಿರಲಿಲ್ಲ. ಆಕೆ ಇನ್ನೂ ಹೆಚ್ಚು ಹಣ ಕಳುಹಿಸು ಎಂದು ಪೀಡಿಸುತ್ತಿದ್ದಳು. ಕಳುಹಿಸದಿದ್ದಾಗ, ಮನೆಯವರ ಜತೆ ಸೇರಿ ಜಗಳವಾಡಿ, ಆತನನ್ನು ಅವಮಾನಿಸುತ್ತಿದ್ದಳು.
ಇನ್ನು ಈಕೆಯ ಈ ಕೆಲಸಕ್ಕೆ, ಮಹಿಳೆಗೆ ಓವೈಸಿಯ AIMIM ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನ ಬೆಂಬಲ ಆರೋಪ. ಜಿಲ್ಲಾಧ್ಯಕ್ಷ ಸೈಯ್ಯದ್ ಬುರ್ಹಾನ್ ಎಂಬಾತ ಈಕೆಯ ಸಂಬಂಧಿಯಾಗಿದ್ದು, ಆತನೂ ಇವರ ಜಗಳಕ್ಕೆ ಸಾಥ್ ನೀಡಿ, ಸಲ್ಮಾನ್‌ಗೆ ಕಿರುಕುಳ ನೀಡುತ್ತಿದ್ದನಂತೆ. ಏಕೆಂದರೆ, ಈತನ ಜತೆ ನಿಖತ್‌ಗೆ ಅಕ್ರಮ ಸಂಬಂಧವಿತ್ತು ಅಂತಲೇ ಸಲ್ಮಾನ್ ಆರೋಪಿಸಿದ್ದಾನೆ.
ಹೀಗಾಗಿ ಭಾರತಕ್ಕೆ ಬಂದು ಪತ್ನಿ ಮಕ್ಕಳ ಜತೆ ಸಂಸಾರ ಮಾಡೋಣವೆಂದು ನಿರ್ಧರಿಸಿದ ಸಲ್ಮಾನ್ , ತುಮಕೂರಿಗೆ ಬಂದರು ಕೂಡ, ನಿಖತ್ ಮಾತ್ರ ಮಕ್ಕಳನ್ನು ಆತನಿಗೆ ತೋರಿಸಿಲ್ಲವಂತೆ. ನಿನಗೆ ನಾನು ಮಕ್ಕಳು ಬೇಕಾದ್ರೆ ಲಕ್ಷ ಲಕ್ಷ ಹಣ ನೀಡು, ಇಲ್ಲವಾದಲ್ಲಿ ಡಿವೋರ್ಸ್ ನೀಡು ಎಂದು ಹೇಳಿದ್ದಾಳೆಂದು ಸಲ್ಮಾನ್ ಆರೋಪಿಸಿದ್ದಾನೆ.
ಇನ್ನು ಈ ಬಗ್ಗೆ ಪೋಲೀಸರಿಗೆ ದೂರು ನೀಡಿದರೂ, ಅವರೂ ಪತ್ನಿಯ ಫ್ಯಾಮಿಲಿಯವರಿಗೇ ಬೆಂಬಲಿಸುತ್ತಿದ್ದಾರೆಂದು ಸಲ್ಮಾನ್ ಆರೋಪಿಸಿದ್ದಾನೆ. ಅಲ್ಲದೇ ಈ ಹಿಂದೆ ಸಂಬಂಧಿಕರ ನಡುವಿನ ಜಗಳದಲ್ಲಿ ಸುಳ್ಳು ಕೇಸ್ ಹಾಕಿಸಿ ಜೈಲಿಗೆ ಕಳುಹಿಸಿದ ಆರೋಪ ಸಹ ಮಾಡಿದ್ದಾನೆ. ಸದ್ಯ ಸಲ್ಮಾನ್ ಜಿಲ್ಲಾಸ್ಪತ್ರೆಯಲ್‌ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಲ್ಮಾನ್ ಮನೆಯವರು ಎಸ್ಪಿ ಕಚೇರಿಗೆ ಈ ಬಗ್ಗೆ ದೂರು ನೀಡಿದ್ದಾರೆ.