Tumakuru News: ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸುಗಳ ಜಾತ್ರೆ ಅಂದ್ರೆ ಅದು ಕರ್ನಾಟಕದಲ್ಲೇ ಮನೆ ಮಾತು. ಪೂರ್ವಿಕರ ಆಚರಣೆಯಂತೆ ಮೊದಲಿಂದೂ ದನಗಳ ಜಾತ್ರೆ ಬಾರಿ ಸದ್ದು ಮಾಡುತ್ತೆ. ರಾಸುಗಳ ಜಾತ್ರೆ ಪ್ರಾರಂಭಗೊಂಡಿದ್ದು ಇಡೀ ಮೈದಾನವೆಲ್ಲಾ ತರೇವಾರಿ ರಾಸುಗಳೇ ತುಂಬಿ ಹೋಗಿವೆ..
ಹಳ್ಳಿಕಾರ್ ತಳಿಯ ಪುಟ್ಟ ಕರಗಳಿಗೆ ಬಾರಿ ಬೇಡಿಕೆ ಹೆಚ್ಚಿದೆ. ಬಳ್ಳಾರಿ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಹಳ್ಳಿಗಳಿಂದ ಜಾತ್ರೆಗೆ ಬಂದಿರೋ ರೈತರು.. ಭರ್ಜರಿ ವ್ಯಾಪಾರ ಮಾಡಿ 50 ಸಾವಿರದಿಂದ 5 ಲಕ್ಷದವರೆಗೆ ತಮಗಿಷ್ಟವಾದ ರಾಸುಗಳನ್ನ ಕೊಂಡು ಗಮನ ಸೆಳೆಯುತಿದ್ದಾರೆ. ರೈತರೇ ತಮ್ಮ ಹೆಗಲ ಮೇಲೆ ಹಾಕಿಕೊಂಡು ಟವಲ್ ಅಡಿಯಲ್ಲಿ ಬೆರಳುಗಳ ಮೂಲಕ ವ್ಯಾಪಾರದ ವಹಿವಾಟು ಗಮನ ಸೆಳೆಯುತ್ತಿದೆ. ಮತ್ತೊಂದು ಕಡೆ ರಾಸುಗಳನ್ನ ಸಿಂಗರಿಸಿ ನಾಸಿಕ್ ಡೋಲ್ ಸದ್ದಿನೊಂದಿಗೆ ಮೆರವಣಿಗೆ ಮಾಡಿಕೊಂಡು ಜಾತ್ರೆಗೆ ಸೇರಿಕೊಳ್ಳುತಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ರಾಸುಗಳ ಜಾತ್ರೆಯಲ್ಲಿ ರೈತರ ಹಬ್ಬದ ಸಂಭ್ರಮಕ್ಕೆ ಕೊನೆ ಇರೋದಿಲ್ಲ. ಒಂದು ವಾರಕ್ಕೂ ಹೆಚ್ಚು ಕಾಲ ನಡೆಯುವ ಈ ಜಾತ್ರೆಯಲ್ಲಿ ವಿವಿಧ ತಳಿಗಳ ರಾಸುಗಳು ರೈತರ ಗಮನ ಸೆಳೆಯುತ್ತವೆ. ಜಾತ್ರೆಯ ಮಹೋತ್ಸವದಲ್ಲಿ ಒಂದೊಂದು ದಿನವೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜನವರಿ 25ರಂದು ಬ್ರಹ್ಮರಥೋತ್ಸವ ಬಳಿಕ ರಾಸುಗಳ ಜಾತ್ರೆ ಮುಕ್ತಾಯಗೊಳ್ಳಲಿದೆ..




