ತುಮಕೂರು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ‌ಗಳ ಬಂಧನ

Tumakuru News: ತುಮಕೂರು: ತುಮಕೂರು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಸರ್ಕಾರದ ಸಬ್ಸಿಡಿ ಹಣ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಡಿಐಸಿ ಜೆಡಿ ಲಿಂಗರಾಜು ಹಾಗೂ ಸಹಾಯಕ ಎಸ್ ಪ್ರಸಾದ್ ಬಂದಿತ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ಇವರು ಸರ್ಕಾರದ ಸಬ್ಸಿಡಿ ಹಣವಾಗಿರುವ 1.15 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.

ಸಣ್ಣ ಉದ್ದಿಮೆದಾರ ಚೆನ್ನಬಸವೇಶ್ವರ ಎಂಬುವವರು ಕಳೆದ 1 ವರ್ಷದಿಂದ ಎಲೆಕ್ಟ್ರಿಕಲ್ ಪ್ಯಾನೆಲ್ ತಯಾರಿಸಿ, ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಲು ಇವರು ಅರ್ಜಿ ಸಲ್ಲಿಸಿದ್ದರು. ಆದರೆ,18.75 ಲಕ್ಷ ಸಬ್ಸಿಡಿ ಮಂಜೂರು ಮಾಡಲು ಅಧಿಕಾರಿಗಳು 1.25 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ.

ಹಾಗಾಗಿ ಚೆನ್ನಬಸವೇಶ್ವರ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅದಕ್ಕೂ ಮುನ್ನ 10 ಸಾವಿರ ಮುಂಗಡ ಹಣವನ್ನು ನೀಡಿದ್ದರು. ಬಳಿಕ 1.15 ಲಕ್ಷ ಹಣ ನೀಡುವಾಗ, ಲೋಕಾಯುಕ್ತ ಪೋಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಎವಿ ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ,ಡಿವೈಎಸ್ಪಿ ಸಂತೋಷ್, ಎಂ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ, ಇಬ್ಬರು ಲಂಚಬಾಕರನ್ನು ಬಂಧಿಸಿರುವ ಪೋಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

About The Author