ಇದು ಇಡೀ ಬೆಂಗಳೂರಿನ ದಿಕ್ಕನ್ನೇ ಬದಲಾಯಿಸೋ ಯೋಜನೆ.. ಇಷ್ಟು ದಿನ ರಾಜಧಾನಿ ಬೆಂಗಳೂರಲ್ಲಿ ಫ್ಲೈ ಓವರ್ ಮೇಲೆ ವಾಹನಗಳು ಓಡಾಡ್ತಿದ್ವು.. ಆದ್ರೆ ಇನ್ಮುಂದೆ ಅಂಡರ್ ಗ್ರೌಂಡ್ನಲ್ಲೂ ವಾಹನಗಳು ಓಡಾಡಬಹುದು.. ವಿದೇಶದಲ್ಲಿ ಇರೋ ಅಂಡರ್ಗ್ರೌಂಡ್ ಹೈವೇ ಇದೇ ಮೊದಲ ಬಾರಿ ಬೆಂಗಳೂರಿಗೆ ಬರ್ತಿದೆ.. ಬೆಂಗಳೂರಿನ ಉತ್ತರ ಭಾಗದ ಹೆಬ್ಬಾಳದಿಂದ ದಕ್ಷಿಣ ಭಾಗದ ಸಿಲ್ಕ್ ಬೋರ್ಡ್ ವರೆಗೆ ಅತಿ ದೊಡ್ಡದಾದ ಸುರಂಗ ರಸ್ತೆ ಮಾರ್ಗ ಮಾಡಲು ಸರ್ಕಾರ ಮುಂದಾಗಿದೆ. ತಮಿಳುನಾಡಿನ ಹೊಸೂರು ಸಂಪರ್ಕಿಸೋ ಈ ರಸ್ತೆಯಿಂದ ದೇವನಹಳ್ಳಿ ಏರ್ಪೋರ್ಟ್ ಹೋಗೋದು ಇನ್ಮುಂದೆ ಸಖತ್ ಸಲೀಸಾಗಲಿದೆ. ಬರೋಬ್ಬರಿ 18 ಕಿಲೋಮೀಟರ್ನಷ್ಟು ದೂರ ಭೂಮಿಯ ಒಳಭಾಗದಲ್ಲೇ ಸುರಂಗ ಕೊರೆದು ರಸ್ತೆ ನಿರ್ಮಿಸೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗ್ತಾನೇ ಇದೆ. ಇದನ್ನ ಕಂಟ್ರೋಲ್ ಮಾಡೋ ಸಲುವಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತೆ.. ಮೊದಲ ಹಂತರದಲ್ಲಿ ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗಿನ 3 ಕಿಲೋ ಮೀಟರ್ ಉದ್ದ ಚತುಷ್ಪಥ ಸುರಂಗ ಮಾರ್ಗ ನಿರ್ಮಿಸಲು ಬಿಬಿಎಂಪಿ ತೀರ್ಮಾನ ಮಾಡಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಹಜವಾಗಿಯೇ ಟ್ರಾಫಿಕ್ ಜಾಮ್ ಅತ್ಯಧಿಕ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ 18 ಕಿ.ಮೀ.ದೂರ ಸುರಂಗ ಮಾರ್ಗ ನಿರ್ಮಿಸುವುದರಿಂದ ಬಹುತೇಕ ಟ್ರಾಫಿಕ್ ಕಿರಿಕಿರಿ ತಪ್ಪಬಹುದು…. ಫ್ಲೈ ಓವರ್, ಎಲಿವೇಟೆಡ್ ಕಾರಿಡಾರ್, ಗ್ರೇಟ್ ಸಪರೇಟರ್ ನಿರ್ಮಾಣ ಮಾಡಲಾಗುತ್ತಿದ್ದರೂ ಟ್ರಾಫಿಕ್ ಜಾಮ್ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.
ಇನ್ನು ಈ ಸುರಂಗ ಮಾರ್ಗ ರಸ್ತೆಗೆ ಬರೋಬ್ಬರಿ 12 ಸಾವಿರದ 900 ಕೋಟಿ ಖರ್ಚಾಗೋ ಸಾಧ್ಯತೆ ಇದೆ. ನಮ್ಮ ಮೆಟ್ರೋ ಸುರಂಗ ತೋಡಿದಂತೆಯೇ ರಸ್ತೆ ಸುರಂಗ ನಿರ್ಮಿಸಲಾಗುತ್ತೆ. ಭೂಮಿಯ ಸಾಕಷ್ಟು ಆಳದಲ್ಲಿ ಈ ಸುರಂಗ ನಿರ್ಮಿಸೋದ್ರಿಂದ ಯಾವುದೇ ಕಟ್ಟಡಗಳಿಗೂ ಹಾನಿ ಆಗಲ್ಲ. ಈ ಸುರಂಗ ನಿರ್ಮಿಸೋಕೆ ಸಾಕಷ್ಟು ವರ್ಷಗಳೇ ಬೇಕಾಗಬಹುದು. ಸದ್ಯ ಈ ಸುರಂಗ ಮಾರ್ಗಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಸಂಬಂಧ ಇನ್ನೂ ಡಿಪಿಆರ್ ಆಗಬೇಕಿದೆ. ಇಂಥದ್ದೊಂದು ಸುರಂಗ ರಸ್ತೆ ಬೆಂಗಳೂರಿಗೆ ಬಂದಿದ್ದೇ ಆದ್ರೆ ಬ್ರಾಂಡ್ ಬೆಂಗಳೂರಿನ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.