ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿದ್ದಾರೆ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಉಮೇಶ್ ಮೇಟಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 22,332 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 98,919 ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವೀರಣ್ಣ ಚರಂತಿಮಠ 76,587 ಮತಗಳನ್ನ ಪಡೆದುಕೊಂಡಿದ್ದಾರೆ. ಇನ್ನು ನೋಟಾಗೆ 1458 ಮತಗಳು ಬಿದ್ದಿವೆ. ಇದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ಪಷ್ಟ ಮುನ್ನಡೆ ಕಾಯ್ದು 22,867 ಮತಗಳ ಅಂತರ ಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಎಚ್ ವೈ ಮೇಟಿ ಪುತ್ರನ ವಿರುದ್ಧವೂ ಸಹ ಬಿಜೆಪಿಯ ವೀರಣ್ಣ ಚರಂತಿಮಠಗೆ ಸೋಲಾಗಿದೆ. ಇನ್ನು 2023ರ ಚುನಾವಣೆಯಲ್ಲೂ ಸಹ ಎಚ್ ವೈ ಮೇಟಿ ವಿರುದ್ಧ ವೀರಣ್ಣ ಚರಂತಿಮಠ ಸೋಲು ಕಂಡಿದ್ದರು.
ಚುನಾವಣೆಗೆ ಮುನ್ನ ಮೇಟಿ ಕುಟುಂಬದೊಳಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಉಂಟಾಗಿ ಭಿನ್ನಮತವೂ ವ್ಯಕ್ತವಾಗಿತ್ತು. ಹೌದು.. ಬೈ ಎಲೆಕ್ಷನ್ ಟಿಕೆಟ್ಗಾಗಿ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಎಚ್.ವೈ. ಮೇಟಿ ಅವರ 4 ಮಕ್ಕಳೆಲ್ಲರೂ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದರು. ಕೊನೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಆಪ್ತ ಎಚ್ ವೈ ಮೇಟಿ ಪುತ್ರರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಸಂಧಾನ ಸಭೆ ಮಾಡಿ ಎಲ್ಲರನ್ನೂ ಸಮಾಧಾನಪಡಿಸಿದ್ದರು. ಅಲ್ಲದೇ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಟ್ಟಾಗಿ ಚುನಾವಣೆ ಮಾಡಬೇಕೆಂದು ಸೂಚಿಸಿ ಕಳುಹಿಸಿದ್ದರು. ಅಂತಿಮವಾಗಿ ಪಕ್ಷದ ಹೈಕಮಾಂಡ್ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿತ್ತು. ಬಳಿಕ ಇತರರು ಸಿಟ್ಟಾಗದೇ ಸಿಎಂ ಆದೇಶವನ್ನು ಪಾಲಿಸಿದ್ದು, ಮಕ್ಕಳೆಲ್ಲರೂ ಒಂದಾಗಿ ಪ್ರಚಾರದಲ್ಲಿ ತೊಡಗಿದ್ದರು. ಇದು ಕಾಂಗ್ರೆಸ್ ಗೆಲುವಿಗೆ ಒಂದು ಪ್ರಮುಖ ಕಾರಣ ಅಂತಾನೇ ಹೇಳಬಹದು.
ಇಲ್ಲಿ ಮುಖ್ಯವಾಗಿ ಬಿಜೆಪಿ ಸೋಲಿಗೆ ಕಾರಣವಂದ್ರೆ ಮುಸ್ಲಿಂ ಮತಗಳು ಬೇಡ ಎಂದಿದ್ದು ಹೌದು, ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತಗಳ ಬಳಿಕ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಮತಗಳು ಕೂಡ ಗೆಲುವಿನಲ್ಲಿ ನಿರ್ಣಾಯಕವಾಗುತ್ತವೆ. ಆದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನನಗೆ ಮುಸ್ಲಿಂ ವೋಟು ಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೇ ಹಿಂದೂಗಳ ಮತಗಳನ್ನ ಒಗ್ಗೂಡಿಸಲು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಚರಂತಿಮಠ ಪರವಾಗಿ ಪ್ರಚಾರ ಮಾಡಿದ್ದರು. ಆದರೂ ತಂತ್ರ ವರ್ಕೌಟ್ ಆಗಿಲ್ಲ. ಅಹಿಂದ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಕೈ ಹಿಡಿದಿದ್ದರಿಂದ ಉಮೇಶ್ ಮೇಟಿ ಗೆಲುವಿಗೆ ಕಾರಣವಾಗಿದೆ.
ಇನ್ನು ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅತಿ ದೊಡ್ಡ ಬಲವಾಗಿದ್ದು ಮಹಿಳಾ ಮತದಾರರು. ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದರು. ಜತೆಗೆ ಮಹಿಳೆಯರೇ ಈ ಬಾರಿ ಹೆಚ್ಚಿನ ಮತ ಚಲಾಯಿಸಿದ್ದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಯೋಜನೆಗಳು ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಿವೆ. ಪ್ರತಿ ತಿಂಗಳು ಖಾತೆಗೆ ಬರುತ್ತಿರುವ ಹಣ ಮತ್ತು ಉಚಿತ ಬಸ್ ಪ್ರಯಾಣದ ಸೌಲಭ್ಯವು ಗ್ರಾಮೀಣ ಭಾಗದ ಮಹಿಳೆಯರನ್ನು ಕಾಂಗ್ರೆಸ್ ಪರವಾಗಿ ನಿಲ್ಲುವಂತೆ ಮಾಡಿದೆ.
ಕಾಂಗ್ರೆಸ್ ಗೆಲ್ಲಲು ಮತ್ತೊಂದು ಪ್ರಮುಖ ಕಾರಣವೆಂದ್ರೆ ಸಿಎಂ ಸಿದ್ದರಾಮಯ್ಯ ಯಾಕಂದ್ರೆ ಸಿದ್ದರಾಮಯ್ಯ ಅವರು ತಮ್ಮ ಬಹುಕಾಲದ ಆಪ್ತ ಎಚ್ವೈ ಮೇಟಿಯವರ ಪುತ್ರನನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲೇಬೇಕು ಎಂದು ಪಣತೊಟ್ಟಿದ್ದರು. ಇದಕ್ಕಾಗಿಯೇ ಒಂದು ವಾರ ಬಾಗಲಕೋಟೆಯಲ್ಲಿಯೇ ಇದ್ದು ಪ್ರಚಾರ ನಡೆಸಿದ್ದರು. ಪಂಚಮಸಾಲಿ ಸೇರಿದಂತೆ ಇತರೆ ಅಹಿಂದ ನಾಯಕರ ಸಭೆ ಮಾಡಿ ಗೆಲುವಿಗೆ ತಂತ್ರ ರೂಪಿಸಿದ್ದರು. ಸಿದ್ದರಾಮಯ್ಯ ಜೊತೆಗೆ ಹೆಗಲಾಗಿ ಸತೀಶ್ ಜಾರಕಿಹೊಳಿ ಹಾಗೂ ತಿಮ್ಮಾಪುರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ನಡೆಸಿದ್ದರು.
ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವರಾದ ಜಿ. ಪರಮೇಶ್ವರ್ ಸೇರಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹಾಗೂ ಶಾಸಕರು, ಸಚಿವರು, ಸಿಎಂ ಪುತ್ರ ಯತೀಂದ್ರ ಆಗಮಿಸಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು.
ಅದರ ಜೊತೆಗೆ ಉಮೇಶ್ ಮೇಟಿ ಅವರ ತಂದೆ, ಮಾಜಿ ಸಚಿವ ಎಚ್ವೈ ಮೇಟಿ ಅವರು ಬಾಗಲಕೋಟೆ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಭಾವ ಹೊಂದಿರುವ ನಾಯಕ. ಅವರ ಸರಳತೆ, ಜನರೊಂದಿಗೆ ಅವರಿಗಿರುವ ನೇರ ಸಂಪರ್ಕ ಮತ್ತು ಸುದೀರ್ಘ ರಾಜಕೀಯ ಅನುಭವವು ಉಮೇಶ್ ಮೇಟಿ ಅವರ ಗೆಲುವಿಗೆ ಕಾರಣವಾಗಿದೆ. ಮೇಟಿ ಕುಟುಂಬ ಎಂದರೆ ಕ್ಷೇತ್ರದ ಜನರಲ್ಲಿರುವ ನಂಬಿಕೆ ಮತ್ತು ತಂದೆಯ ಬಗ್ಗೆ ಇರುವ ಸಹಾನುಭೂತಿ ಮತಗಳಾಗಿ ಪರಿವರ್ತನೆಯಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆಯ ವರ್ಚಸ್ಸು ಹಾಗೂ ಅನುಕಂಪ ಸಹ ಉಮೇಶ್ ಮೇಟಿ ಗೆಲುವಿಗೆ ಕಾರಣಗಳಾಗಿವೆ.
ಹೀಗೆ ಹಲವು ಕಾರಣಗಳಿಂದ ಉಮೇಶ್ ಮೇಟಿ ಅಂತಿಮವಾಗಿ ಉಪಚುನಾವಣೆಯಲ್ಲಿ 22 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿಯ ಚರಂತಿಮಠ ಎಚ್ ವೈ ಮೇಟಿ ವಿರುದ್ಧ ಮಾತ್ರವಲ್ಲ ಇದೀಗ ಅವರ ಅವರ ಪುತ್ರನ ವಿರುದ್ಧವೂ ಮುಗ್ಗರಿಸಿದ್ದಾರೆ.




