Sunday, June 1, 2025

Latest Posts

ಸಿದ್ದರಾಮಯ್ಯಗೂ ಗೊತ್ತಿದೆ, ಪರಮೇಶ್ವರ್‌ ಅವ್ರನ್ನ ಸಿಲುಕಿಸಿದ್ದು ಆ ಕೈ ಪ್ರಭಾವಿ ನಾಯಕ : ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ದಳಪತಿ..!

- Advertisement -

ನವದೆಹಲಿ : ತಮ್ಮ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವುದರಿಂದ ಅವರ ಜಮೀನುಗಳಿಗೆ ಹೆಚ್ಚಿನ ಬೆಲೆ ಬರುತ್ತದೆ ಅಂತ ಹೀಗೆ ಮಾಡಿದ್ದಾರೆ. ಅವರ ಜಮೀನುಗಳ ಬೆಲೆ ಏರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಗಿತ್ತು. ಇದೀಗ ಅವರ ಅಂದ್ರೆ ಡಿಕೆಶಿ ಜಮೀನುಗಳಿಗೆ ಬೆಲೆ ಏರಿಸಿಕೊಳ್ಳಲು ಹಾಗೆ ಮಾಡಿರಬಹುದು. ಈ ರಾಜಕರಣಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಂದ್ರ ಗೃಹ ಸಚಿವರಿಗೆ ಕಳುಹಿಸಿದ್ದು, ಅವರ ಬಳಿ ಪ್ರಸ್ತಾಪ ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ. ಇವರು ಶಾಶ್ವತವಾಗಿ ಇರುತ್ತಾರಾ? ಮುಂದೆ ಬದಲಾಗಲಿದೆ, ಅದು ನನಗೆ ಗೊತ್ತಿದೆ. ಈಗ ಜಮೀನುಗಳಿಗೆ ಬೆಲೆ ಇಲ್ವಾ? ಅವರ ಜಮೀನುಗಳಿಗೆ ಬೆಲೆ ಏರಬಹುದು. 40 ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್​​ಐಟಿ ಏನೋ ಮಾಡಿದ್ದರಲ್ಲಾ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇಷ್ಟೆಲ್ಲಾ ಮಾಡಿ ಈಗ ನನ್ನ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರಲ್ಲಾ, ಇವರು ಮಾಡಿಕೊಂಡದ್ದರಲ್ಲಿ ಶೇಕಡಾ 50 ರಷ್ಟು ಸರ್ಕಾರಿ ಜಮೀನುಗಳಿವೆ. ಇವರು ಮಾಡಿರುವುದು ನಮಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕೊಟ್ಟ ಜಾಗ ನುಂಗಿದ್ದು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದಾರಾಮಯ್ಯ ತಾವು ಅಹಿಂದ ಎನ್ನುತ್ತಾರೆ. ದಲಿತರ ಭೂಮಿ ಕಬಳಿಸಿದವರನ್ನೇ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗೇನೋ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಅಂತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಹಿಂದುಳಿದ ವರ್ಗಗದವರನ್ನು ಗುರಿಯಾಗಿಸಿ ಪರಮೇಶ್ವರ್‌ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಚಿವ ಪರಮೇಶ್ವರ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್​​ನ ಪ್ರಭಾವಿ ನಾಯಕನೇ ಕಾರಣ‌ ಎನ್ನುವ ಮೂಲಕ ದಳಪತಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಇನ್ನೂ ನಟಿ ರನ್ಯಾರಾವ್‌ ಚಿನ್ನ ತರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ಪ್ರಭಾವಿ ನಾಯಕ, ಪರಮೇಶ್ವರ್ ದಲಿತರ ಸಮಾವೇಶ ಮಾಡಲು ಹೊರಟರು. ತಾವೇ ಮುಂದಿನ ಸಿಎಂ ಆಗುತ್ತೇನೆ ಎಂದು ಸಮಾವೇಶಕ್ಕೆ ಮುಂದಾದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಭಾವಿ ನಾಯಕನೇ ಅವರನ್ನು ಸಿಲುಕಿಸಿದ್ದಾರೆ. ಇದೆಲ್ಲಾ ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಮುಂದೆ ಸಿಎಂ ಆಗಲು ಟವಲ್ ಹಾಸಿಕೊಂಡು ಇರುವವರೇ ಸಂದೇಶ ನೀಡಿದ್ದಾರೆ. ಈ ಪ್ರಕರಣ ಹೊರಬರಲು ಸಂದೇಶ ನೀಡಿದ್ದೇ ಆ ಪ್ರಭಾವಿ ನಾಯಕ. ಸಿಎಂ ಹತ್ತಿರ ಗುಪ್ತಚರ ಇಲ್ಲವೇ ಎಂದು ಕುಮಾರಸ್ವಾಮಿ ಕೆಂಡವಾಗಿದ್ದಾರೆ.

ಇದೆಲ್ಲಾ ಗೊತ್ತಿದ್ದರು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕನಿಂದ ಇದೆಲ್ಲಾ ಆಗಿದೆ. ಅದೆನೋ ಎಷ್ಟು ಸಮಿತಿ ಮಾಡುತ್ತಿದ್ದೀರಲ್ಲವೇ, ಅದೆಲ್ಲಾ ಏನಾಯ್ತು. ಮಾತು ಎತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ನುಡಿದಂತೆ ನಡೆಯಲು ಎಷ್ಟು ಟ್ಯಾಕ್ಸ್ ಹಾಕಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಇನ್ನೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಈ ಆರೋಪಕ್ಕೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಹೌದು, ರಿಯಲ್​ ಎಸ್ಟೇಟ್​ ಡೆವಲಪ್​ ಮಾಡೋದಕ್ಕೆ ಹೆಸರು ಬದಲಾವಣೆ ಮಾಡಿದ್ದೀವಿ ಅಂತ ಅಂದ್ಕೊಳ್ಳಿ. ನಮ್ಮ ಜನರ ಆಸ್ತಿ ಬೆಲೆ ಕೂಡ ಹೆಚ್ಚಾಗಬೇಕು. ರಾಮನಗರ ಅದು ಬೆಂಗಳೂರು ಜಿಲ್ಲೆ, ಕುಮಾರಸ್ವಾಮಿ ಯಾಕೆ ಹಾಸನದಿಂದ ಇಲ್ಲಿಗೆ ಬಂದಿದ್ದಾರೆ. ಅವರು ಹಾಸನದಲ್ಲೇ ರಾಜಕಾರಣ ಮಾಡಬಹುದಿತ್ತು. ಮೊದಲು ಇವರ ಹೆಸರು ಬದಲಾವಣೆ ಮಾಡಿಕೊಳ್ಳಲಿ. ಹೆಚ್​.ಡಿ ಕುಮಾರ್​ಸ್ವಾಮಿ ಅಂತ ಇರೋ ಹೆಸರನ್ನ ಬದಲಾಯಿಸಿಕೊಳ್ಳಲಿ ಎಂದು ಟಾಂಗ್‌ ನೀಡಿದ್ದಾರೆ.

ನಾವು ಬೆಂಗಳೂರು ಜಿಲ್ಲೆಯವರು, ನಮಗೂ ನಮ್ಮದೆ ಆದ ಆಸೆ ಇದೆ. ಮದ್ರಾಸ್​ನ ಚೆನೈ ಅಂತ ಮಾಡಿದ್ದಾರೆ. ಗುಲ್ಬರ್ಗಾವನ್ನ ಕಲಬುರ್ಗಿ ಅಂತ ಯಾಕೆ ಮಾಡಿದ್ರು..? ಅದೇ ರೀತಿ ಬೆಂಗಳೂರು ಜಿಲ್ಲೆ ಅಂತ ಮಾಡಿದ್ರೆ, ಇವರಿಗೆ ಏನು ತೊಂದ್ರೆ. ನಾವು ಮುಂದೆ ಏನ್​ ಮಾಡ್ತೀವಿ ಅಂತ ಕಾದು ನೋಡಲಿ ಎಂದು ಗರಂ ಆಗಿದ್ದಾರೆ.

ಹೌದ್ರಿ ರಿಯಲ್​ ಎಸ್ಟೇಟ್​ ಡೆವಲಪ್ಮೆಂಟ್​ಗಾಗಿನೇ ಹೆಸರು ಬದಲಾವಣೆ ಮಾಡಿದ್ದೀವಿ. ನಮ್ಮ ಬೆಂಗಳೂರು, ನಮ್ಮ ಹಳ್ಳಿಯವರು ಅಭಿವೃದ್ಧಿ ಆಗಬೇಕು, ಎಲ್ಲರ ಆಸ್ತಿಗಳ ಬೆಲೆ ಹೆಚ್ಚಾಗಬೇಕು. ರೈತರ ಬದುಕು ಒಳ್ಳೆಯದಾಗಬೇಕು, ಉದ್ಯೋಗ ಸಿಗಬೇಕು. ಹೊರ ದೇಶದಿಂದ ಬಂದು ಬಂಡವಾಳ ಹಾಕಬೇಕು ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದೀವಿ ಎಂದು ಡಿಕೆ ಶಿವಕುಮಾರ್ ರಾಮನಗರ ಮರು ನಾಮಕರಣವನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಈ ರಾಮನಗರ ಜಿಲ್ಲೆಯ ಮರು ನಾಮಕರಣದ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಭಾರೀ ಆರೋಪ – ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿದ್ದು, ಈ ನಡುವೆ ಡಿಕೆ ಶಿವಕುಮಾರ್‌ ರಾಮನಗರದಲ್ಲಿ ಬೋರ್ಡ್‌ ಬದಲಾವಣೆಯನ್ನು ಮಾಡಿದ್ದಾರೆ.

- Advertisement -

Latest Posts

Don't Miss