ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಹಳೆ ಮೊಳಗಿಸಿದ್ದಾರೆ. ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದಿಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ. ಹೀಗಂತ ಬಿಡಗಿ ರೈತರಿಗೆ ದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ರೈತರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ್ದಾರೆ. ರೈತರಿಗೆ ಮಿಡಿಯುವುದನ್ನು ಬಿಟ್ಟು ಈ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ.
ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು, ನನ್ನ ಹೆಸರಿನಲ್ಲಿ ಶೆಲ್ಟರ್ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ ಇವೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ. 9 ಸಾವಿರ ಎಕರೆ ಭೂಮಿಯನ್ನು ಟೌನ್‌ಶಿಪ್‌ಗೆ ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ನೀವೆಲ್ಲರೂ ವಿರೋಧ ಇದ್ದೀರಾ. ನಾನು ರೈತರ ಪರ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿದ್ದೀರಿ?. ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ? ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್ ಮಾಡಬಹುದು ಅಲ್ಲವೇ? ರಾಜ್ಯದಲ್ಲಿ ಬೇರೆ ಬೇರೆ ಇಂತಹ ಒಣಭೂಮಿ ಬೇಕಾದಷ್ಟು ಇದೆ. ಅಲ್ಲೆಲ್ಲ ಮಾಡುವುದು ಬಿಟ್ಟು ಬಿಡದಿಯ ಮೇಲೆಯೇ ಏಕೆ ಬಿದ್ದಿದ್ದೀರಿ ಎಂದು ಹೆಚ್‌ಡಿಕೆ ಗುಡುಗಿದ್ದಾರೆ.
ನಿಮ್ಮ ಉದ್ದೇಶ ಬಿಡದಿಯ ಜನರನ್ನು ಉದ್ಧಾರ ಮಾಡುವುದು ಅಲ್ಲ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೀರಿ ಅಷ್ಟೇ. ಭೂಮಿ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲಿಕ್ಕೆ ನಿಮ್ಮಲ್ಲಿ ದುಡ್ಡಿಲ್ಲ. ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ. ಯಾವುದೇ ಒತ್ತಡ, ದಬ್ಬಾಳಿಕೆಗೆ ರೈತರು ಹೆದರಬಾರದು ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

