ಧರ್ಮಸ್ಥಳದಲ್ಲಿ ನಡೆದಿರುವುದಾಗಿ ಆರೋಪಿಸಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿರ್ಣಯಕ್ಕೆ ತ್ವರಿತವಾಗಿ ಎಳೆಯುವ ರೀತಿಯನ್ನು ಪ್ರಶ್ನಿಸಿ ಐದು ತೀಕ್ಷ್ಣ ಪ್ರಶ್ನೆಗಳನ್ನು ಎಸೆದಿದ್ದಾರೆ.
ತೇಜಸ್ವಿ ಸೂರ್ಯ ಎಕ್ಸ್ ನಲ್ಲಿ ನೀಡಿದ ಹೇಳಿಕೆಯಲ್ಲಿ, ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬರ ಅಸಂಬದ್ಧ ಹೇಳಿಕೆ ಆಧರಿಸಿ ಎಸ್‌ಐಟಿ ರಚಿಸಿರುವುದು ರಾಜ್ಯ ಸರ್ಕಾರದ ತುರ್ತು ನಿರ್ಧಾರದ ಹಿಂದೆ “ದೊಡ್ಡ ಪಿತೂರಿ” ಇದ್ದೀತು ಎಂಬ ಅನುಮಾನವಿದೆ ಎಂದು ಅವರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುವಂತೆ ಸಲಹೆ ನೀಡಿದ್ದರೂ, ಅದನ್ನು ಉಲ್ಲೇಖಿಸದೇ ಸರಕಾರ ತ್ವರಿತವಾಗಿ ಎಸ್‌ಐಟಿ ರಚಿಸಿದ್ದು ಪ್ರಶ್ನಾರ್ಥಕವಾಗಿದೆ ಎಂದು ಅವರು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಎತ್ತಿದ ಐದು ಪ್ರಮುಖ ಪ್ರಶ್ನೆಗಳ ಯಾವ್ದು ಅನ್ನೋದನ್ನ ನೋಡೋದಾದ್ರೆ
1) ಎಸ್‌ಐಟಿ ರಚನೆಯ ಹಿಂದಿನ ತಾರ್ಕಿಕತೆ ಏನು? ಪ್ರಾಥಮಿಕ ತನಿಖೆ ನಡೆಸದೆ, ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಕಡೆಗಣಿಸಿ ಈ ತನಿಖಾ ತಂಡವನ್ನು ಏಕೆ ರಚಿಸಲಾಯಿತು? ಈ ಕ್ರಮದಿಂದ ಸರ್ಕಾರ ಸ್ವತಃ ಪಿತೂರಿಯಲ್ಲಿ ಭಾಗಿಯಾದಂತೆ ತೋರಿಸುತ್ತಿಲ್ಲವೇ? ಹಿಂದೂಯೇತರ ಸಂಸ್ಥೆಗಳ ವಿರುದ್ಧ ಇದೇ ರೀತಿಯ ಆರೋಪ ಬಂದಿದ್ದರೆ, ಅದಕ್ಕೆ ಸರಕಾರ ಇದೇ ತುರ್ತು ತೋರಿಸುತ್ತಿತ್ತೇ?
2) ಎಸ್‌ಐಟಿ ರಚನೆ ಹಿಂದೆ ದೆಹಲಿಯಿಂದ ಆದೇಶಗಳು ಬಂದಿದ್ದವೆಂದು ನಮಗೆ ತಿಳಿದು ಬಂದಿದೆ. ಅಂಥಹ ನಾಯಕರನ್ನು ಸಿಎಂ ಬಹಿರಂಗಪಡಿಸಬೇಕೆಂಬುದು ಜನರ ನಿರೀಕ್ಷೆ. ಅವರ ಹೆಸರುಗಳನ್ನು ಬಹಿರಂಗಪಡಿಸಲು ನೀವು ಸಿದ್ದರಾ?
3) ಆರ್ಥಿಕ ನೆರವಿನ ಮೂಲ ಯಾವ್ದು? ಅವರ ವಿರುದ್ಧ ಏಕೆ ತನಿಖೆ ನಡೆಸಿಲ್ಲ?
ಅಂದ್ರೆ ಪ್ರಕರಣದಲ್ಲಿ ಭಾಗಿಯಾದ ಹಿರಿಯ ವಕೀಲರು, ಯೂಟ್ಯೂಬ್ ಚಾನೆಲ್‌ಗಳು, ಮತ್ತು ಮಾಧ್ಯಮ ಪೋರ್ಟಲ್‌ಗಳಿಗೆ ಹಣಕೊಟ್ಟವರು ಯಾರು? ಇಡೀ ಅಭಿಯಾನದ ಹಿಂದಿನ ಸಂಘಟನಾತ್ಮಕ ಶಕ್ತಿ ಮತ್ತು ಹಣಕಾಸು ಮೂಲಗಳ ವಿರುದ್ಧ ಸರಕಾರ ತನಿಖೆ ನಡೆಸಬೇಕಾಗಿಲ್ಲವೇ?
4) ಕರ್ನಾಟಕದ ವ್ಯಾಪ್ತಿಯನ್ನು ಮೀರಿದ ನಟರು ಇದರಲ್ಲಿ ಭಾಗಿಯಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ‘ಎಸ್‌ಐಟಿ ರಚನೆಗೆ ಆತುರ ತೋರಿಸಿದಂತೆಯೇ ನೀವು ನ್ಯಾಯಯುತ ತನಿಖೆಗಾಗಿ ಅದೇ ತುರ್ತನ್ನು ತೋರಿಸುತ್ತೀರಾ?. ಕೇಂದ್ರೀಯ ತನಿಖೆಯಿಂದ ಸತ್ಯ ಬಹಿರಂಗವಾಗಬಹುದು ಎಂಬ ಭಯ ರಾಜ್ಯಕ್ಕೆ ಇದೆ.
5) ಧರ್ಮಸ್ಥಳ ವಿವಾದವು ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ವಿಶಾಲ ರಾಜಕೀಯ ತಂತ್ರದ ಭಾಗವಾಗಿದೆ. ‘ಕೋಮು ವಿರೋಧಿ ಕಾರ್ಯಪಡೆ’ ಮತ್ತು ರೋಹಿತ್ ವೇಮುಲಾ ಮಸೂದೆಗೆ ಸಂಬಂಧವಿದೆ ಎಂದ ಅವರು, ‘ಧರ್ಮಸ್ಥಳ ಅಭಿಯಾನಕ್ಕೆ ರಾಹುಲ್ ಗಾಂಧಿಯವರ ಆಶೀರ್ವಾದ ಇದೆಯೇ? ಎಂಬೆಲ್ಲ ಪ್ರಶ್ನೆಗಳನ್ನ ಕೇಳಿದ್ದಾರೆ.
ಸದ್ಯ ಎಸ್‌ಐಟಿ ರಚನೆಯ ಕುರಿತು ತೇಜಸ್ವಿ ಸೂರ್ಯ ಎತ್ತಿರುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಿಳಿದಿವೆ. ಈ ವಿಚಾರದಲ್ಲಿ ಸರ್ಕಾರ ನೀಡಬಹುದಾದ ಸ್ಪಷ್ಟನೆಗೆ ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.




