Saturday, May 3, 2025

Latest Posts

 ಉಗ್ರರನ್ನು ಬಿಡಬಾರದು, ಬೇಟೆಯಾಡಬೇಕು : ಭಯೋತ್ಪಾದನೆಯ ವಿರುದ್ಧ ಗುಡುಗಿದ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್

- Advertisement -

ನವದೆಹಲಿ : ತಾವು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಉಗ್ರರು ನಡೆಸಿದ್ದ ಭೀಕರ ದಾಳಿಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರು ಕಟುವಾದ ಪದಗಳಲ್ಲಿ ಖಂಡಿಸಿದ್ದಾರೆ. ಅಲ್ಲದೆ ಉಗ್ರರನ್ನು ಮಟ್ಟ ಹಾಕಲು ಭಾರತದೊಂದಿಗೆ ಪಾಕಿಸ್ತಾನವು ಮುಂದೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ವ್ಯಾನ್ಸ್‌, ಪಾಕಿಸ್ತಾನವು ಭಾರತದೊಂದಿಗೆ ಸಹಕರಿಸಬೇಕಾಗುತ್ತದೆ. ಕೆಲವೊಮ್ಮೆ ತನ್ನ ಭೂಪ್ರದೇಶದಲ್ಲಿರುವ ಭಯೋತ್ಪಾದಕರನ್ನು ಬೇಟೆಯಾಡಬೇಕು. ಭಾರತ ಮತ್ತು ಪಾಕಿಸ್ತಾನದ ಬಗ್ಗೆ ನೀವು ಚಿಂತಿತರಾಗಿದ್ದೀರಾ ಎಂದು ಕೇಳಿದಾಗ, ವ್ಯಾನ್ಸ್, , ಯಾವುದೇ ಸಮಯದಲ್ಲಿ ನಾವು ನೋಡಿದಾಗ, ವಿಶೇಷವಾಗಿ ಪರಮಾಣು ಶಕ್ತಿಗಳನ್ನು ಹೊಂದಿರುವ ಎರಡು ದೇಶಗಳ ನಡುವೆ, ಒಂದು ಹಾಟ್‌ಸ್ಪಾಟ್ ವಿಚಾರವಾಗಿ ಈ ರೀತಿಯ ಭೀಕರ ಉಗ್ರ ದಾಳಿಯನ್ನು ನೋಡಿದಾಗ ನಾನು ಚಿಂತಿತನಾಗಿದ್ದೇನೆ. ನಾವು ಭಾರತ ಮತ್ತು ಪಾಕಿಸ್ತಾನದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂಬುದು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಜವಾಬ್ದಾರಿಯುತವಾಗಿ ವರ್ತಿಸಲಿ..

ಅಲ್ಲದೆ ಈ ಭಯೋತ್ಪಾದಕ ದಾಳಿಗೆ ಭಾರತವು ಅತಿ ಹೆಚ್ಚಾಗಿ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗದ ರೀತಿಯಲ್ಲಿ ವರ್ತಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಈ ವಿಚಾರದಲ್ಲಿ ಸ್ಪಷ್ಟವಾಗಿ ಹೇಳುವುದಾದರೆ, ಪಾಕಿಸ್ತಾನವು ಜವಾಬ್ದಾರಿಯುತವಾಗಿ, ಕೆಲವೊಮ್ಮೆ ತಮ್ಮ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೇಟೆಯಾಡುವ ಕೆಲಸ ಮಾಡಬೇಕು ಎಂದು ಗುಡುಗಿದ್ದಾರೆ. ಅಲ್ಲದೆ ಭಾರತ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹದ ಹೋರಾಟದಲ್ಲಿ ಸಹಕರಿಸಬೇಕು, ಅದು ತನಗಿರುವ ಜವಾಬ್ದಾರಿಯನ್ನು ಮರೆಯುವುದಿಲ್ಲ ಎಂದು ನಮ್ಮ ಭಾವನೆಯಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಭಾರತದಲ್ಲಿ ನಾವು ಇದ್ದ ವೇಳೆಯಲ್ಲಿಯೇ ಈ ರೀತಿಯ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದೊಂದು ವಿನಾಶಕಾರಿ ದಾಳಿಯಾಗಿತ್ತು ಎಂದು ವ್ಯಾನ್ಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ವ್ಯಾನ್ಸ್‌ ಹಾಗೂ ಅವರ ಪತ್ನಿ ಉಷಾ ಇಬ್ಬರು ಕಳೆದ ಏಪ್ರಿಲ್ 21 ರಂದು‌ ಭಾರತಕ್ಕೆ ಭೇಟಿ ನೀಡಿದ್ದರು. ಅಂದು ಬೆಳಿಗ್ಗೆ ಪಾಲಂ ವಾಯುನೆಲೆಯಲ್ಲಿ ಬಂದಿಳಿದಿದ್ದ ಅವರಿಗೆ ಸರ್ಕಾರಿ ಗೌರವದ ಮೂಲಕ ಔಪಚಾರಿಕವಾಗಿ ಅದ್ದೂರಿ ಸ್ವಾಗತ ಕೋರಲಾಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅವರ ಅಧಿಕೃತ ನಿವಾಸದಲ್ಲಿ ಔಪಚಾರಿಕ ಸಭೆ ನಡೆಸಿದ್ದರು. ಈ ವೇಳೆ ಅವರು ಎರಡು ದೇಶಗಳ ನಡುವಿನ ಆರ್ಥಿಕತೆ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿದ್ದರು.

ವ್ಯಾನ್ಸ್‌ ಭಾರತದಲ್ಲಿದ್ದಾಗಲೇ ನಡೆದಿತ್ತು ದಾಳಿ..

ಜೆಡಿ ವ್ಯಾನ್ಸ್ ಏಪ್ರಿಲ್ 21 ರಿಂದ 24 ರವರೆಗೆ ತಮ್ಮ ಕುಟುಂಬದೊಂದಿಗೆ ಭಾರತದ ಅಧಿಕೃತ ಭೇಟಿಯಲ್ಲಿದ್ದಾಗ ಈ ದಾಳಿ ಸಂಭವಿಸಿತ್ತು. ಬಳಿಕ ಘಟನೆ ಖಂಡಿಸಿದ್ದ ಜೆಡಿ ವ್ಯಾನ್ಸ್, ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದರು. ಭಾರತದ ಪಹಲ್ಗಾಮ್‌ನಲ್ಲಿ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಉಷಾ ಮತ್ತು ನಾನು ನಮ್ಮ ಸಂತಾಪ ಸೂಚಿಸುತ್ತೇವೆ. ಕಳೆದ ಕೆಲವು ದಿನಗಳಿಂದ, ಈ ದೇಶದ ಜನರ ಪ್ರೀತಿಯಲ್ಲಿ ನಾವು ಮುಳುಗಿದ್ದೇವೆ. ಈ ಭಯಾನಕ ದಾಳಿಯನ್ನು ಅವರು ಶೋಕಿಸುತ್ತಿರುವಾಗ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರೊಂದಿಗೆ ಇರುತ್ತವೆ ಎಂದು ಅವರು ತಮ್ಮ ಟ್ವಿಟ್‌ ಅಂದರೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಸಾಂತ್ವನ ಹೇಳಿದ್ದರು.

ಇನ್ನೂ ಪ್ರಮುಖವಾಗಿ ಇದಕ್ಕೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಇದೇ ವಿಚಾರವಾಗಿ ಭಾರತದ ವಿದೇಶಾಂಂಗ ಸಚಿವ ಎಸ್.‌ ಜೈಶಂಕರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆಯೂ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಲ್ಲಿ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದರು.‌ ಅಲ್ಲದೆ ಉಗ್ರರ ದಾಳಿಯ ತನಿಖೆಯ ಕುರಿತು ಭಾರತದೊಂದಿಗೆ ಸಹಕರಿಸಲು ನೀವು ಮುಂದಾಗಬೇಕೆಂದು ಪಾಕಿಸ್ತಾನಕ್ಕೆ ಇದೇ ವೇಳೆ ಕರೆ ಮಾಡಿ ಅವರು ಕಿವಿ ಹಿಂಡಿದ್ದರು.

- Advertisement -

Latest Posts

Don't Miss