ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸುಧಾರಿಸಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದಂತೆ ಧರ್ಮೇಂದ್ರ ನಿಧನರಾಗಿದ್ದಾರೆಂಬ ವದಂತಿಯೂ ಹಬ್ಬಿತ್ತು. ಆದರೆ, ಕುಟುಂಬದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಗೆ ಹೋಗಿದ್ದಾರೆ. ಆದರೆ, ಮನೆಯಲ್ಲೂ ಚಿಕಿತ್ಸೆ ಮುಂದುವರೆದಿದೆ.
ಧರ್ಮೇಂದ್ರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂಬ ಸುದ್ದಿ ಹರಡುತ್ತಿದ್ದಂತೆ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ ಸೇರಿದಂತೆ ಹಲವು ನಟ ನಟಿಯರು ಭೇಟಿ ನೀಡಿದ್ದರು.
ಧರ್ಮೇಂದ್ರ ಅವರನ್ನು ಇಂದು ಬೆಳಗ್ಗೆ 7.30ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮನೆಯಲ್ಲೇ ಟ್ರೀಟ್ಮೆಂಟ್ ನೀಡಲು ಕುಟುಂಬ ನಿರ್ಧರಿಸಿರುವುದಾಗಿ ಡಾಕ್ಟರ್ ಪ್ರತೀತ್ ಮಾಹಿತಿ ನೀಡಿದ್ದಾರೆ.
ಧರ್ಮೇಂದ್ರ ಸಾವಿನ ಬಗ್ಗೆ ವದಂತಿ ಹಬ್ಬಿತ್ತು. ಅನೇಕ ರಾಜಕಾರಣಿಗಳು ಈ ಬಗ್ಗೆ ಪೋಸ್ಟ್ ಕೂಡ ಮಾಡಿದ್ದರು. ಬಳಿಕ ಹೇಮಾ ಮಾಲಿನಿ ಈ ಬಗ್ಗೆ ಸ್ಪಷ್ಟನೆ ನೀಡಿದರು. ಪತಿ ಧರ್ಮೇಂದ್ರ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದರು.
ಇನ್ನು, ಧರ್ಮೇಂದ್ರ ಅವರನ್ನು ಕಳೆದ ತಿಂಗಳು ನಿಯಮಿತ ಆರೋಗ್ಯ ತಪಾಸಣೆಗಾಗಿ ದಾಖಲಿಸಲಾಗಿತ್ತು. ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಡಿಯೋಲ್ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಧರ್ಮೇಂದ್ರ ಚೇತರಿಸಿ ಕೊಳ್ಳುತ್ತಿರುವುದಕ್ಕೆ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

