ತಪ್ಪೇ ಮಾಡದಿದ್ರೂ ಜೈಲು ಶಿಕ್ಷೆಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ, ಸಂತ್ರಸ್ತನೊಬ್ಬ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಬರೋಬ್ಬರಿ 5 ಕೋಟಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಕಳೆದ 2021ರಲ್ಲಿ ಕುಶಾಲನಗರ ತಾಲೂಕಿನ ಬಸವನಹಳ್ಳಿ ನಿವಾಸಿ ಕುರುಬರ ಸುರೇಶ್ ಪತ್ನಿ ಕಾಣೆಯಾಗಿದ್ರು. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಸುರೇಶ್ ದೂರು ಕೊಟ್ಟಿದ್ರು. ಬಳಿಕ 2022ರಲ್ಲಿ ಮೈಸೂರು ಜಿಲ್ಲೆಯ ಬೆಟ್ಟದಪುರ ಠಾಣಾ ವ್ಯಾಪ್ತಿಯಲ್ಲಿ, ಅಸ್ಥಿ ಪಂಜರವೊಂದು ಪತ್ತೆಯಾಗಿತ್ತು. ಮಲ್ಲಿಗೆ ಶವ ಅಂತಾ ಅನುಮಾನಗೊಂಡ ಪೊಲೀಸರು, ಡಿಎನ್ಎ ಟೆಸ್ಟಿಗಾಗಿ ಕಳುಹಿಸಿದ್ರು. ವರದಿ ಬರುವ ಮೊದಲೇ ಮಲ್ಲಿಗೆ ಪತಿ ಸುರೇಶ್ ನನ್ನ ಬಂಧಿಸಿ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದ್ರು.
18 ತಿಂಗಳ ಬಳಿಕ ಡಿಎನ್ ಎ ರಿಪೋರ್ಟ್ ಬಂದಿತ್ತು. ಅಸ್ಥಿ ಪಂಜರ ಮಲ್ಲಿಗೆಯದ್ದಲ್ಲ ಅಂತಾ ಸಾಬೀತಾಯ್ತು. ಅಲ್ಲಿಯವರೆಗೂ ಜೈಲಿನಲ್ಲೇ ಇದ್ದ ಸುರೇಶ್ ನನ್ನ, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬಿಡುಗಡೆ ಮಾಡಿತ್ತು. ಜೊತೆಗೆ 1 ಲಕ್ಷ ಪರಿಹಾರ ನೀಡಲು ಗೃಹ ಇಲಾಖೆಗೆ ಸೂಚಿಸಿತ್ತು.
ಇದಾದ ಕೆಲ ತಿಂಗಳ ಬಳಿಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 2025ರಲ್ಲಿ ಮಡಿಕೇರಿ ರೆಸ್ಟೋರೆಂಟ್ನಲ್ಲಿ ಮಲ್ಲಿಗೆ ಊಟ ಮಾಡುವುದಕ್ಕೆ ಬಂದಿದ್ರು. ಆ ವೇಳೆ ಸುರೇಶ್ ಸ್ನೇಹಿತರ ಕಣ್ಣಿಗೆ ಬಿದ್ದಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಮಲ್ಲಿಗೆಯನ್ನ ಬಂಧಿಸಿ, ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ರು. ಸದ್ಯ, 3 ವರ್ಷಗಳಿಂದ ಮಲ್ಲಿಗೆ ಎಲ್ಲಿದ್ದರು. ದಿಢೀರ್ ನಾಪತ್ತೆಗೆ ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಸಲಾಗ್ತಿದೆ.
ಪತ್ನಿ ಬದುಕಿದ್ದರೂ ಕೊಲೆ ಆರೋಪದಲ್ಲಿ ಜೈಲು ಶಿಕ್ಷೆ ನೀಡಿದ್ದನ್ನು ಪ್ರಶ್ನಿಸಿ, ಸಂತ್ರಸ್ತ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ರಮವಾಗಿ ಬಂಧಿಸಿದ್ದಕ್ಕೆ 5 ಕೋಟಿ ಪರಿಹಾರ ನೀಡ್ಬೇಕು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಾಕ್ಷ್ಯಗಳನ್ನು ತಿರುಚಿದ್ದು ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ಸರಿಯಾದ ತನಿಖೆ ನಡೆಸದೇ ಅಕ್ರಮವಾಗಿ ನನ್ನನ್ನ ಬಂಧಿಸಿದ್ರು ಅಂತಾ ಆರೋಪಿಸಿದ್ದಾರೆ. ಅರ್ಜಿಯಲ್ಲಿ ತನಿಖಾಧಿಕಾರಿ ಪ್ರಕಾಶ್ ಬಿಜಿ, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್, ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಯಟ್ಟಿಮನಿ, ಮಹೇಶ ಮತ್ತು ಸಹಾಯಕ ಇನ್ಸ್ ಪೆಕ್ಟರ್ ಸೋಮಶೇಖರ್ ಹೆಸರನ್ನು ಉಲ್ಲೇಖಿಸಿದ್ದಾರೆ.