ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಹದಿನೇಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ಎಪ್ಪತ್ತು ದಿನಗಳಿಂದಲೂ ಅವರು ಜೈಲಲ್ಲಿದ್ದಾರೆ. ಇತ್ತೀಚೆಗೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅವರು ಬಳ್ಳಾರಿ ಜೈಲಿಗೆ ಹೋಗುತ್ತಿದ್ದಂತೆಯೇ, ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿದ್ದಾರೆ. ಅಲ್ಲಿನ ಜೈಲಿಗೆ ಭೇಟಿ ನೀಡುವ ಮೂಲಕ ಪತಿ ದರ್ಶನ್ ಜೊತೆ ಒಂದಷ್ಟು ಮಾತನಾಡಿದ್ದಾರೆ.
ವಕೀಲರ ಜೊತೆ ಬಳ್ಳಾರಿ ಜೈಲಿಗೆ ಶನಿವಾರ ಭೇಟಿ ನೀಡಿದ ವಿಜಯಲಕ್ಷ್ಮಿ, ಎರಡು ಬ್ಯಾಗ್ ನೊಂದಿಗೆ ಪತಿ ಬಳಿ ಬಂದಿದ್ದಾರೆ. ಕಾರಾಗೃಹದ ನಿಯಮ ಪ್ರಕಾರ ದರ್ಶನ್ ಅವರ ಭೇಟಿಗೆ ಅವಕಾಶವಿದೆ. ಸೆಕ್ಯುರಿಟಿ ಚೆಕ್ ಬಳಿಕ ವಿಜಯಲಕ್ಷ್ಮಿ ಭೇಟಿಗೆ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ವಿಜಲಯಕ್ಷ್ಮಿ, ದರ್ಶನ್ ಅವರಿಗೆ ಒಂದಷ್ಟು ತಿಂಡಿ, ಹೊಸ ಬಟ್ಟೆ, ಟೂಥ್ ಪೇಸ್ಟ್, ಬ್ರೆಷ್, ಡ್ರೈ ಫ್ರೂಟ್ಸ್ ಇತ್ಯಾದಿ ತಂದಿದ್ದಾರೆ.
ಅತ್ತ ಪೊಲೀಸರು ದರ್ಶನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊತ್ತಿನಲ್ಲೇ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದು, ದರ್ಶನ್ ಜೊತೆ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ರನ್ನ 8ನೇ ಬಾರಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಪ್ರತಿ ವಾರ ಪುತ್ರ ವಿನೀಶ್ ಜೊತೆಗೆ ದರ್ಶನ್‌ರನ್ನ ಭೇಟಿಯಾಗಿ ಸಮಾಧಾನ ಹೇಳುತ್ತಿದ್ದರು. ಇದೀಗ ದರ್ಶನ್‌ರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ 3ನೇ ದಿನ ವಿಜಯಲಕ್ಷ್ಮಿ ಅವರು, ದರ್ಶನ್‌ರನ್ನ ಭೇಟಿಯಾಗಿದ್ದಾರೆ. ದರ್ಶನ್ ಆರೋಗ್ಯ ವಿಚಾರಿಸಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ದರ್ಶನ್ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.