ಪ್ರಧಾನಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿ ಅಂತಾ ಹೇಳಿಕೊಂಡು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದತ್ತು ಪುತ್ರ ಎಂದು ಬಿಂಬಿಸಿಕೊಂಡು, ವೈದ್ಯರೊಬ್ಬರಿಗೆ ಬರೋಬ್ಬರಿ 2.7 ಕೋಟಿ ರೂಪಾಯಿ ಪಂಗನಾಮ ಹಾಕಿದ ವಂಚಕನನ್ನ, ವಿಜಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯನಗರದ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ. ಈತ ಜಮ್ಮು ಕಾಶ್ಮೀರ ಮೂಲದ ವೈದ್ಯರೊಬ್ಬರನ್ನು ಸಂಪರ್ಕಿಸಿದ್ದ. ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ನಂಬಿಸಿದ್ದಾನೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸ್ಟೇಜ್ ಹಂಚಿಕೊಂಡಿರುವುದಾಗಿ ಫೋಟೋಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದಾನೆ.
ದೇವನಹಳ್ಳಿ ಬಳಿ ಅತ್ಯಾಧುನಿಕ ವಿಲ್ಲಾ ಮಾದರಿಯಲ್ಲಿ ಆಯುರ್ವೇದ ಆಸ್ಪತ್ರೆ ತೆರೆಯಲು, ಸರ್ಕಾರದಿಂದ ಅವಕಾಶ ಮಾಡಿಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ವೈದ್ಯರಿಂದ ಹಂತ ಹಂತವಾಗಿ 2.7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾನೆ.
ವಂಚನೆಗೊಳಗಾದ ವೈದ್ಯರು ದೂರು ನೀಡಿದ ಬಳಿಕ ವಿಜಯನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಯಲ್ಲಿ ಸುಜಯೇಂದ್ರ ಕಳ್ಳಾಟ ಗೊತ್ತಾಗಿದೆ. ಸುಜಯೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನ ವಂಚನೆಯ ಅಸಲಿಯತ್ತು ಬಯಲಾಗಿದೆ.
ಆರೋಪಿ ಸುಜಯೇಂದ್ರ ಈಗಾಗಲೇ 2 ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಅವನ ವಿರುದ್ಧ ಈಗಾಗಲೇ 4 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಆದರೂ ಬುದ್ಧಿ ಕಲಿಯದ ಸುಜಯೇಂದ್ರ ಮತ್ತೆ ವಂಚನೆ ಕೇಸಲ್ಲಿ ತಗ್ಲಾಕಿಕೊಂಡಿದ್ದಾನೆ.

