ಮೈಸೂರು : ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊತ್ತಿದ್ದಾರೆ. ಈ ಮೂಲಕ ಡಬಲ್ ಎಂಜಿನ್ ಆಡಳಿತದ ಕನಸು ಕಂಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಕೇಂದ್ರ ಎನ್ಡಿಎ ಸರ್ಕಾರಕ್ಕೆ 11 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ ಎಂದು ಪ್ರತಿಜ್ಜೆ ಮಾಡಿದ್ದಾರೆ. ಅಲ್ಲದೆ ಈ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಅಧಿಕ ಸ್ಥಾನಗಳ ಗೆಲುವಿಗಾಗಿ ಈಗಿನಿಂದಲೇ ಸವಾಲು ಸ್ವೀಕರಿಸಿದ್ದೇನೆ. ಅದರಂತೆಯೇ ಸ್ಥಳೀಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ವಿಜಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಳೆದ ಒಂದೂವರೆ ವರ್ಷದಿಂದ ಪಕ್ಷಕ್ಕಾಗಿ ಹೋರಾಟ ನಡೆಸಿದ್ದೇನೆ. ನನ್ನ ಕಾರ್ಯವೈಖರಿಯು ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಕಾರ್ಯಕರ್ತರಿಗೆ ತೃಪ್ತಿ ನೀಡಿದೆ. ಹೀಗಾಗಿ ನನ್ನನ್ನು ಬದಲಾಯಿಸುವ ಚಿಂತನೆಯಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನನ್ನೇ ಕಂಟಿನ್ಯೂ ಮಾಡುವ ವಿಶ್ವಾಸ ನನಗಿದೆ. ಆದರೆ ಹೈಕಮಾಂಡ್ ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈಗಲೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿ 130 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಸ್ಪರ್ಧೆಯಿಂದ ಹೊರಬಂದಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಮನಸ್ಸು ಮಾಡಿದೆ.ಕೈ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ನಾಯಕತ್ವ ಬದಲಾವಣೆಗೆ ಅಡಿಪಾಯ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಿ ದೆಹಲಿಗೆ ಸ್ಥಳಾಂತರ ಮಾಡಿದೆ ಎಂದು ವಿಜಯೇಂದ್ರ ಬಾಂಬ್ ಸಿಡಿಸಿದ್ದಾರೆ.
ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಕಳಪೆ ಆಡಳಿತದ ಕುರಿತು ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದ ಜನರೂ ಸಹ ಸರ್ಕಾರಕ್ಕೆ ಶಾಪ ನೀಡುತ್ತಿದ್ದಾರೆ. ನಾವು ಜನರ ಆಕಾಂಕ್ಷೆಗಳನ್ನು ನೀಗಿಸುವ ಸರ್ಕಾರವನ್ನು ನಿರೀಕ್ಷೆ ಮಾಡುತ್ತೇವೆ. ಯಾರು ಸಿಎಂ ಆಗುತ್ತಾರೆ ಎನ್ನುವುದು ನಮಗೆ ಚಿಂತೆಯಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಬದಲಾವಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಮುಂಬರುವ ಎರಡು ತಿಂಗಳಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ವಿಜಯೇಂದ್ರ ಹೇಳಿರುವಂತೆಯೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ರಹಸ್ಯ ಬೆಳವಣಿಗೆಗಳು ಮುಂದುವರೆದಿದ್ದು, ಈ ಮೂಲಕ ಸಚಿವ ಕೆ.ಎನ್. ರಾಜಣ್ಣ ಹೇಳಿರುವಂತೆ ಸೆಪ್ಟೆಂಬರ್ ಕ್ರಾಂತಿಯಾಗಲಿದೆಯಾ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತಾಗಿದೆ.