ದಿನಕರ್‌ ತೂಗುದೀಪ ಸಿನಿಮಾದಲ್ಲಿ ವಿರಾಟ್.!

‘ಕಿಸ್‌’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿರಾಟ್‌ ಈಗ ಮೂರನೇ ಸಿನಿಮಾ ಒಪ್ಪಿಕೊಂಡಿದ್ದು, ಆ ಸಿನಿಮಾವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡಲಿದ್ದಾರೆ. ‘ಜೊತೆ ಜೊತೆಯಲಿ’, ‘ಸಾರಥಿ’, ‘ನವಗ್ರಹ’ ಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಕ ದಿನಕರ್ ತೂಗುದೀಪ ಈ ಹಿಂದೆಯೇ ನೀಡಿದ್ದಾರೆ. ಇದೀಗ ದಿನಕರ್ ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ತಮ್ಮ ಡಾನ್ಸ್‌, ಸ್ಟೈಲಿಶ್ ಲುಕ್‌ ಮತ್ತು ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ‘ಕಿಸ್‌’ ಸಿನಿಮಾ ನಂತರ ವಿರಾಟ್‌ ಅವರು ಎ.ಪಿ. ಅರ್ಜುನ್‌ ನಿರ್ದೇಶನದ ‘ಅದ್ಧೂರಿ ಲವರ್‌’ ಎಂಬ ಸಿನಿಮಾವನ್ನು ಒಪ್ಪಿಕೊಂಡರು. ಇದೀಗ ಅವರ ಮೂರನೇ ಸಿನಿಮಾವನ್ನು ಖ್ಯಾತ ನಿರ್ದೇಶಕ ದಿನಕರ್‌ ತೂಗುದೀಪ ಅವರ ಜತೆ ಮಾಡುತ್ತಿದ್ದಾರೆ.

‘ಹೊಸಬರ ಜತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹಾಸ್ಯ, ಪ್ರೇಮಕಥೆ, ಆ್ಯಕ್ಷನ್‌ ಹೀಗೆ ಎಲ್ಲವೂ ಕೂಡ ಇವೆ. ಇದು ಕುಟುಂಬ ಸಮೇತ ಕೂತು ನೋಡುವಂತಹ ಸಿನಿಮಾ. ಬಹಳ ಒಳ್ಳೆ ಕಥೆಯಾಗಿದ್ದು, ವಿರಾಟ್‌ಗೆ ಪಕ್ಕಾ ಹೊಂದಿಕೆಯಾಗುತ್ತದೆ. ಕಂಪ್ಲೀಟ್‌ ಎಂಟರ್‌ಟೇನರ್‌ ಸಿನಿಮಾವನ್ನು ಮಾಡುತ್ತಿದ್ದೇವೆ’ ಎಂದು ದಿನಕರ್‌ ತೂಗುದೀಪ ಹೇಳಿಕೊಂಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ವಿರಾಟ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹೊಸ ರೀತಿಯ ವಿರಾಟ್‌, ಹೊಸ ಕಥೆಯ ಜತೆಗೆ ತೆರೆ ಮೇಲೆ ಬರಲಿದ್ದಾರೆ. ಇನ್ನು ಜಯಣ್ಣ ಅವರಂತಹ ನಿರ್ಮಾಪಕರು, ದಿನಕರ್‌ ಅವರಂತಹ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಭಿನ್ನವಾದ ಪಾತ್ರ, ಅದ್ಭುತವಾದ ಕಥೆ ಇದೆ. ಪೂರ್ಣ ಪ್ರಮಾಣದ ಕಮರ್ಷಿಯಲ್‌ ಸಿನಿಮಾ ಇದಾಗುತ್ತದೆ. ಈ ಪಾತ್ರಕ್ಕಾಗಿ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ವಿರಾಟ್ ತಿಳಿಸಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

About The Author